ಹೊಸದಿಗಂತ ವರದಿ ಕಲಬುರಗಿ:
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸರ್ಕಾರ ತನ್ನ ವಾದ ಮಂಡಿಸಲು ವಿಫಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲದಂತಾಗಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೆಗೌಡ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರೆ ಇಲ್ಲದೇ ಇದ್ದರೆ ಜನರಿಗೆ ಕುಡಿಯುವ ನೀರು ಸಿಗುತ್ತಾ? ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲಿಲ್ಲ ಎಂದಾಗ ರಾಜ್ಯ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಲಿದೆ ಎಂದು ಮೊದಲೇ ಹವಾಮಾನ ಇಲಾಖೆ ವರದಿ ನೀಡಿತ್ತು. ಆಗಲೇ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಬೇಕಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಾಗಿತ್ತು ಎಂದರು.
ಯಾವುದೇ ಆದೇಶವಿಲ್ಲದಿದ್ದಾಗಲೇ ತಮಿಳುನಾಡು ರಾಜ್ಯಕ್ಕೆ ನೀರು ಬಿಟ್ಟಿದ್ದಾರೆ. ಸ್ಟಾಲಿನ್ ಜೊತೆ ಮಾತಾಡಿಕೊಂಡು ಅವರ ಜೊತೆಗೂಡಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ರಾಜ್ಯ ಸರ್ಕಾರ ನೀರು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೇಲಾಡುತ್ತಿದ್ದು,ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ವೈರಿಯಾಗಿಯೇ ಇರಬೇಕು ಎಂದು ಕಾಂಗ್ರೆಸ್ ಆಸೆ ಪಟ್ಟಿತ್ತು. ಆದರೆ ಮೈತ್ರಿಯಿಂದ ಇದೀಗ ಇವರಿಗೆ ದೊಡ್ಡ ಆತಂಕ ಎದುರಾಗಿದೆ ಎಂದರು.