ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳ-ಟಿಬೆಟ್ ಗಡಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದ, ಅಲ್ಲಿ ಸಿಲುಕಿರಬಹುದಾದ ಕನ್ನಡಿಗರಿಗೆ ನೆರವಾಗಲು ಮತ್ತು ಮಾಹಿತಿ ಸಂಗ್ರಹಿಸಲು ರಾಜ್ಯ ಕಂದಾಯ ಇಲಾಖೆಯು ಸಹಾಯವಾಣಿ ಅಥವಾ ‘ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ’ವನ್ನು ಪ್ರಾರಂಭಿಸಿದೆ.
ಏನಿದು ಗೂಗಲ್ ಡಾಕ್ಯುಮೆಂಟ್?
ರಾಜ್ಯ ಕಂದಾಯ ಇಲಾಖೆಯು ವಿಶೇಷ ಗೂಗಲ್ ಡಾಕ್ಯುಮೆಂಟ್ ಲಿಂಕ್ ಅನ್ನು ಪರಿಚಯಿಸಿದೆ. ಪ್ರವಾಹದಲ್ಲಿ ಸಿಲುಕಿರುವ ಪ್ರವಾಸಿಗರು, ಅವರ ಕುಟುಂಬದ ಸದಸ್ಯರು ಅಥವಾ ಟ್ರಾವೆಲರ್ ಗೈಡ್ ಗಳು ತಮ್ಮ ವಿವರಗಳನ್ನು (ಹೆಸರು, ಪ್ರಸ್ತುತ ಸ್ಥಳ, ಸಂಪರ್ಕ ಸಂಖ್ಯೆ) ಹಂಚಿಕೊಳ್ಳಲು ಸಾಧ್ಯವಾಗುವಂತೆ ಕಂದಾಯ ಇಲಾಖೆಯು ಈ ಗೂಗಲ್ ಡಾಕ್ಯುಮೆಂಟ್ ಅನ್ನು ಹಂಚಿಕೊಂಡಿದೆ. ಈ ಮೂಲಕ ಮಾಹಿತಿಯನ್ನು ತಕ್ಷಣವೇ ಸರ್ಕಾರಕ್ಕೆ ತಲುಪಿಸಿ ಸಹಾಯ ಪಡೆಯಬಹುದಾಗಿದೆ.
ಕರ್ನಾಟಕ ಸರ್ಕಾರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ನೇಪಾಳ ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
24/7 ಹೆಲ್ಪ್ ಲೈನ್ ಓಪನ್
ಸಂತ್ರಸ್ತರಿಗಾಗಿ 24/7 ಹೆಲ್ಪ್ ಲೈನ್ ಆರಂಭಿಸಿದ್ದು, ಎಂತಹದೇ ಸಮಸ್ಯೆ ಎದುರಾದರೂ ಪ್ರವಾಸಿಗರು 1070 or 080-22253707 ಈ ಸಂಖ್ಯೆಗಳಿಗೆ ಅಥವಾ [email protected]ಗೆ ಇ-ಮೇಲ್ ಮೂಲಕ ಕೂಡ ಸಂಪರ್ಕಿಸಬಹುದು.
133 ಭಾರತೀಯರು ಮಿಸ್ಸಿಂಗ್!
ಆಗಸ್ಟ್ 26 ರಂದು ಭೋಟೇಕೋಷಿ ನದಿಯಲ್ಲಿ ಉಂಟಾದ ಭಾರೀ ಪ್ರವಾಹವು ರಾಸುವಾ ಜಿಲ್ಲೆಯ ಹಳ್ಳಿಗಳ ಮೇಲೆ ಅಪ್ಪಳಿಸಿದ್ದು, ಸುಮಾರು 133 ಭಾರತೀಯರು ಈ ಭೀಕರ ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ.



