ಹೊಸದಿಗಂತ ಡಿಜಿಟಲ್ ಡೆಸ್ಕ್:
2025-26ನೇ ಸಾಲಿನಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 360.01 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2,200 ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆಗೆ ಆದೇಶಿಸಿದೆ. ಅನುದಾನ ಬಳಕೆಗೆ 14 ಮಾನದಂಡಗಳನ್ನ ಬಿಡುಗಡೆ ಮಾಡಿದ್ದು, ಅದರ ಅನ್ವಯವೇ ಅನ್ವಯ ಅನುದಾನ ಬಳಕೆಗೆ ಸೂಚನೆ ನೀಡಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 2025-26ನೇ ಸಾಲಿನಲ್ಲಿ ರಾಜ್ಯ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಮಂಜೂರು ಮಾಡಲಾದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟು 359.86 ಕೋಟಿ ರೂ.ಗಳಿಗೆ ಶಾಲಾವಾರು ಕ್ರಿಯಾಯೋಜನೆ ನೀಡಲಾಗಿದೆ. ಇದರಲ್ಲಿ ಸಂಭಾವ್ಯ ಪಟ್ಟಿಯಲ್ಲಿರುವ 912 ಶಾಲೆಗಳಲ್ಲಿ ಅಗತ್ಯವಿರುವ 1,911 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 325.32 ಕೋಟಿ ರೂ. ಅಂದಾಜು ವೆಚ್ಚವನ್ನು ಲೆಕ್ಕ ಹಾಕಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ತರಗತಿ ಕೊಠಡಿ ನಿರ್ಮಾಣ ಕಾಮಗಾರಿ 14.50 ಲಕ್ಷ ರೂ. ಹಾಗೂ ಪ್ರೌಢಶಾಲಾ ತರಗತಿ ಕೊಠಡಿ ನಿರ್ಮಾಣ ಕಾಮಗಾರಿಗೆ 17.15 ಲಕ್ಷ ರೂ. ಘಟಕ ವೆಚ್ಚಗಳಂತೆ ಲೆಕ್ಕ ಹಾಕಲಾಗಿದೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಹೊಸ ಶೌಚಾಲಯಗಳ ನಿರ್ಮಾಣಕ್ಕಾಗಿ 63.29 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಮತ್ತು ನರೇಗಾ ಯೋಜನೆ ಅಡಿಯಲ್ಲಿ ಒಗ್ಗೂಡಿಸುವಿಕೆ. ಉಪಕ್ರಮಕ್ಕೆ ಕೆಲಸಗಳನ್ನ ಕೈಗೊಳ್ಳಬಹುದಾಗಿದೆ. ದುರಸ್ತಿಗಾಗಿ 100 ಕೋಟಿ ರೂ. ಮಂಜೂರು ಮಾಡಲಾಗಿದೆ. ಜೊತೆಗೆ ಸ್ಥಳೀಯ ಅವಶ್ಯಕತೆಗಳು ಮತ್ತು ಆದ್ಯತೆಗಳ ಪ್ರಕಾರ ನಿಯಮಗಳ ಅನುಸಾರ ಜಿಲ್ಲೆಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದ ಬಳಿಕ ಕಾಮಗಾರಿ ಕೈಗೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಿದೆ.
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

