ಹೊಸದಿಗಂತ ವರದಿ,ಬಳ್ಳಾರಿ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗಾಗಿ ಜಾರಿಗೊಳಿಸಿದ ಅನೇಕ ಯೋಜನೆಗಳಿಗೆ ಕಾಂಗ್ರೇಸ್ ಸರ್ಕಾರ ಕತ್ತರಿ ಹಾಕಿದೆ, ಬರ ಹಿನ್ನೆಲೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದರೂ, ನಯಾ ಪೈಸೆ ಪರಿಹಾರ ನೀಡದೆ, ರೈತರ ಬೆನ್ನುಮೂಳೆ ಮುರಿದಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿ ಕುಮಾರ್ ಅವರು ವಾಗ್ದಾಳಿ ನಡೆಸಿದರು.
ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ರೈತರು ಕೊಳವೆಬಾವಿ ಸಂಪರ್ಕ ಕಲ್ಪಿಸಿಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಬೇಕಿದೆ, ನಮ್ಮ ಅವಧಿಯಲ್ಲಿ ನಾವೇ ಭರಿಸುತ್ತಿದ್ದೇವು, ಅವಧಿಯಲ್ಲಿ ರೈತರಿಗೆ 4 ಸಾವಿರ ನೀಡಲಾಗುತ್ತಿತ್ತು, ಅದನ್ನು, ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಸ್ಥಗಿತಗೋಳಿಸಿದೆ, ರೈತರನ್ನು ನಾವು ಪ್ರೋತ್ಸಾಹಿಸಿದರೆ ಕಾಂಗ್ರೇಸ್ ಬೀದಿಗೆ ತಳ್ಳುತ್ತಿದೆ. ರಾಜ್ಯ ಸರ್ಕಾರ ಸಂಪೂರ್ಣ ಲೂಟಿ ಹೊಡೆಯುವ ಸರ್ಕಾರ. ಸಿ.ಎಂ.ಸಿದ್ದರಾಮಯ್ಯ ಒಬ್ಬ ಡೋಂಗಿ ಅರ್ಥಶಾಸ್ತ್ರಜ್ಞ ಎಂದು ಕಿಡಿಕಾರಿದರು.
ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಅಭ್ಯರ್ಥಿ ಯಾರೇ ಆಗಲಿ, ಅವರ ಪರವಾಗಿ ಎಲ್ಲರೂ ಶ್ರಮಿಸೋಣ, ಪಕ್ಷದ ಮಾಲೀಕರು ನಮ್ಮ ಕಾರ್ಯಕರ್ತರು ಇಂದಿನಿಂದಲೇ ಪ್ರಚಾರಕ್ಕಿಳಿಯಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ನವರ ಸುಳ್ಳು ಗ್ಯಾರಂಟಿ ಬಗ್ಗೆ ಜನರಿಗೆ ತಿಳಿದಿದೆ, ಅವರ ಆಟ ಇನ್ಮುಂದೆ ನಡೆಯೊಲ್ಲ, ನಮ್ಮದು ಮೋದಿಯೇ ಗ್ಯಾರಂಟಿ, ನಾವು ಎಂದು ಜನರಿಗೆ ಸುಳ್ಳು ಹೇಳಿಲ್ಲ, ಹೇಳೋದು ಇಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಮುಖಂಡರಾದ ಶರಣು ತಲ್ಲಿಕೇರಿ, ಚಂದ್ರಶೇಖರ್ ಪಾಟೀಲ್ ಹಲಗೇರಿ, ಡಾ.ಬಸವರಾಜ್, ಮುರಹರ ಗೌಡ, ವಿರೂಪಾಕ್ಷ ಗೌಡ, ಗುರುಲಿಂಗನ ಗೌಡ, ಕೆ.ರಾಮಲಿಂಗಪ್ಪ, ತಿಮ್ಮಾರೆಡ್ಡಿ, ಶಿವಕೃಷ್ಣ, ಇಬ್ರಾಹಿಂ ಬಾಬು, ಮಾರುತಿ ಪ್ರಸಾದ್, ನೂರ್ ಭಾಷಾ, ಹನುಮಂತಪ್ಪ, ಡಾ.ಮಹಿಪಾಲ್ ಇತರರಿದ್ದರು.