ಹೊಸದಿಗಂತ ವರದಿ ಮಡಿಕೇರಿ:
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯತ್ತ ಸಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಸಣ್ಣ ವ್ಯಾಪಾರಿಗಳ ಮೇಲೆ ತೆರಿಗೆ ಬ್ರಹ್ಮಾಸ್ತ್ರ ಬಿಟ್ಟಿದೆ. ಜಿಎಸ್‌ಟಿ ನೋಟಿಸ್ ನೀಡುವ ಮೂಲಕ ವ್ಯಾಪಾರಿಗಳ ಹೊಟ್ಟೆಗೆ ಪೆಟ್ಟು ನೀಡಲು ಹೊರಟಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿ ಕಾರಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಾಣಿಜ್ಯ ಇಲಾಖೆಯ ಈ ನಡೆ ಖಂಡನೀಯ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ವ್ಯಾಪಾರಿಗಳಿಗೆ ಜಿಎಸ್ಟಿ ತೆರಿಗೆ ನೋಟಿಸ್ ನೀಡುವ ನಿರ್ಧಾರ ಕೇಂದ್ರ ಸರ್ಕಾರದ್ದಲ್ಲ. ಇದು ರಾಜ್ಯ ಸರ್ಕಾರದ ತೀರ್ಮಾನ. ಬೇಕರಿ, ಕಾಂಡಿಮೆಂಟ್ ಸೇರಿದಂತೆ ಸಣ್ಣ ವ್ಯಾಪಾರಿಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ಏಕಾಏಕಿಯಾಗಿ ಲಕ್ಷಾಂತರ ರೂ. ತೆರಿಗೆ ಸಂಗ್ರಹಿಸುವ ಇರಾದೆ ರಾಜ್ಯ ಸರ್ಕಾರದ್ದಾಗಿದೆ. ಈ ರೀತಿಯ ನೋಟಿಸು ಜಾರಿ ಮಾಡಿ ವ್ಯಾಪಾರಿಗಳನ್ನ ಆತಂಕಕ್ಕೆ ದೂಡಿರುವ ವಾಣಿಜ್ಯ ತೆರಿಗೆ ಇಲಾಖೆಯ ನಡೆ ಖಂಡನಾರ್ಹ ಎಂದು ಯದುವೀರ್ ಹೇಳಿದ್ದಾರೆ.
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಬರಿದಾಗಿದೆ. ಅದನ್ನು ತುಂಬಿಸಿಕೊಳ್ಳಲು ಸಣ್ಣ ವ್ಯಾಪಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ಎಂದು ಸಂಸದರು ಕಿಡಿಕಾರಿದ್ದಾರೆ.