ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಧನ ಮಂಜೂರು ಮಾಡಿದ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕಿಸ್ತಾನದ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಾಟಕದ ಮಂಗಳೂರು ಮೂಲದ ವೀರ ಯೋಧ ಪ್ರಾಂಜಲ್‌ ಅವರ ಕುಟುಂಬಕ್ಕೆ ರೂ. 50,00,000 (ಐವತ್ತು ಲಕ್ಷ) ಪರಿಹಾರಧನವನ್ನು ಸಿಎಂ ಸಿದ್ದರಾಮಯ್ಯ ಮಂಜೂರು ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ (ಟ್ವಿಟರ್)‌ ಖಾತೆಯಲ್ಲಿ ಮಾಹಿತಿ ನೀಡಿರುವ ಸಿಎಂ, “ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.

ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ.

ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ಇಂದು ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!