ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಾಂಗ್ರೆಸ್ ಸರಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲವಿದ್ದರೂ ಐಷಾರಾಮಿ ವಿಮಾನದಲ್ಲಿ ಪ್ರಧಾನಿ ಅವರ ಭೇಟಿಗೆ ಸಿಎಂ ಅವರು, ಜಮೀರ್ ಅಹ್ಮದ್ ತೆರಳಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಜಮೀರ್ ಅಹ್ಮದ್ ಹಂಚಿಕೊಂಡಿದ್ದಾರೆ. ಇದು ಅಸಹ್ಯ ತರುವಂತಿದೆ ಎಂದು ಟೀಕಿಸಿದರು.
ಪರಿಹಾರ ನೀಡದ ಸರಕಾರದ ಸಚಿವರು ರೈತರಿಗೆ ಅವಮಾನ ಮಾಡುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿಲ್ಲ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಎ.ಸಿ.ರೂಮಿನಲ್ಲಿ ಸಭೆ ಮಾಡಿದ್ದಾರೆ. ಕಾಟಾಚಾರಕ್ಕೆ ಅಲ್ಲಿ ಇಲ್ಲಿ ಭೇಟಿ ಕೊಟ್ಟಿದ್ದಾರೆ. ರೈತರಿಗೆ ಪರಿಹಾರ ಕೊಡದ ಸರಕಾರದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.
ನಿನ್ನೆ ದಿನ 1 ಸಾವಿರ ಕೋಟಿಯನ್ನು ಅಲ್ಪಸಂಖ್ಯಾತರ ಕಾಲನಿಗಳಿಗೆ ನೀಡಿ ಆದೇಶ ನೀಡಿದ್ದಾರೆ . ಬಿಜೆಪಿ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಹಣ ನೀಡಿದೆ. ಆದರೆ, ನಿಮ್ಮ ಥರ ಇಂಥ ಕಷ್ಟದ ಸಂದರ್ಭ ರೈತರನ್ನು ಕಡೆಗಣಿಸಿದ್ದು ಎಷ್ಟು ಸರಿ? ರೈತ ಸಮೂಹದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿ ಎಲ್ಲರೂ ಇದ್ದಾರೆ. ರಾಜ್ಯ ಸರಕಾರದ ಆದ್ಯತೆ ರೈತರಲ್ಲ; ಅಲ್ಪಸಂಖ್ಯಾತರು ಮಾತ್ರ ಎಂದು ಕಟುವಾಗಿ ಟೀಕಿಸಿದರು.