ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೆ ಏಕರೂಪ ಟಿಕೆಟ್ ದರ ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕಳೆದ ಮಾರ್ಚ್‌ನಲ್ಲಿ ನಡೆದ ಅಧಿವೇಶನದ ವೇಳೆ ಈ ಬಗ್ಗೆ ಮಾತನಾಡಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಏಕರೂಪದ ಟಿಕೆಟ್ ದರವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಾರಿ ಮಾಡಲಿದ್ದೇವೆ ಎಂದಿದ್ದರು. ಅದರಂತೆ ಸರ್ಕಾರ ಆದೇಶ ಹೊರಡಿಸಿದ್ದು, ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಿಗೆ ಏಕರೂಪ ದರ ಜಾರಿಯಾಗಲಿದ್ದು, ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂದು ತಿಳಿಸಿದೆ.
ಕರ್ನಾಟಕ ಸಿನಿಮಾಸ್ (ನಿಯಂತ್ರಣ) ನಿಯಮಗಳು, 2014 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿರುವ ಈ ಕೆಳಗಿನ ನಿಯಮಗಳ ಕರಡನ್ನು, ಕರ್ನಾಟಕ ಸಿನಿಮಾಸ್ (ನಿಯಂತ್ರಣ) ಕಾಯ್ದೆ, 1964 (ಕರ್ನಾಟಕ ಕಾಯ್ದೆ 23, 1964) ರ ಸೆಕ್ಷನ್ 19 ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಲು ಪ್ರಸ್ತಾಪಿಸಲಾಗಿದೆ.
ಈ ಕರಡನ್ನು, ಪರಿಣಾಮ ಬೀರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಸದರಿ ವಿಭಾಗದ ಉಪವಿಭಾಗ (1) ರ ಪ್ರಕಾರ ಇಲ್ಲಿ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 (ಹದಿನೈದು ದಿನಗಳು) ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.
ಎಲ್ಲಾ ಭಾಷಾ ಚಲನಚಿತ್ರಗಳ ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿನ ಪ್ರತಿ ಪ್ರದರ್ಶನದ ಟಿಕೆಟ್‌ನ ಬೆಲೆ ಮನರಂಜನಾ ತೆರಿಗೆಯನ್ನು ಒಳಗೊಂಡಂತೆ ರೂ. 200 (ಇನ್ನೂರು ರೂಪಾಯಿಗಳು ಮಾತ್ರ) ಮೀರಬಾರದು ಎಂದು ತಿಳಿಸಲಾಗಿದೆ.