ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿರುವ ರಾಜ್ಯ ಸರಕಾರ: ಸಿ.ಟಿ ರವಿ ಕಿಡಿ

ಹೊಸದಿಗಂತ ವರದಿ, ಮೈಸೂರು: 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೊಳಿಸಲು ಮುಂದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಮಾಜಿ ಸಚಿವ ಸಿ.ಟಿ ರವಿ ಕಿಡಿಕಾರಿದರು.

ಶುಕ್ರವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಅನ್ನುವುದು ಕೇಂದ್ರ ಹಾಗೂ ರಾಜ್ಯಗಳ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರ ಯುವ ಸಮುದಾಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಯುವ ಸಮಯದಾಯವನ್ನು ಸ್ವಾಭಿಮಾನಿ ಹಾಗೂ ಸ್ವಾವಲಂಬಿಗಳನ್ನಾಗಿ ಮಾಡಲೆಂದು ಎನ್‌ಇಪಿಯನ್ನು ಜಾರಿಗೊಳಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಯಾವ ರೀತಿಯಾಗಿರಬೇಕೆಂದು ಕರ್ನಾಟಕದವರೇ ಆದ ಕಸ್ತೂರಿ ರಂಗನ್ ನೇತೃತ್ವದಲ್ಲಿ 12 ಜನರ ಸಮಿತಿ ಮಾಡಿ, ದೇಶದ ಉದ್ದಗಲಕ್ಕೂ ಲಕ್ಷಾಂತರ ಜನರ ಅಭಿಪ್ರಾಯ ಸಂಗ್ರಹಿಸಿ, ಕರಡು ರೂಪಿಸಿದ ಬಳಿಕ, ಅದರ ಮೇಲೆ ನಿರಂತರವಾಗಿ ಚರ್ಚೆಗಳು ನಡೆದಿವೆ. ಆ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಶಿಫಾರಸು ಮಾಡಿತು. ಆಧುನಿಕ ಸವಾಲು ಎದುರಿಸಲು ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡು ನಮ್ಮ ಮಕ್ಕಳನ್ನ ಸ್ವಾವಲಂಬಿಯಾಗಿ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಪ್ರಾದೇಶಿಕ ಭಾಷೆ ರಕ್ಷಣೆ ಮಾಡಲು ಮಾತೃಭಾಷೆಯನ್ನು ಅಳವಡಿಸಿಕೊಂಡಿದೆ. ನಮ್ಮ ಮಕ್ಕಳು ಡಿಗ್ರಿ ಪಡೆದು ನಿರುದ್ಯೋಗಿಗಳಾಗಬಾರದು ಎಂದು ಕೌಶಲ್ಯ ತರಬೇತಿಯನ್ನೂ ಅಳವಡಿಸಿಕೊಂಡಿದೆ. ಕರ್ನಾಟಕ ಎಂದರೆ ಹಲವು ವರ್ಷಗಳಿಂದ ತಮಿಳು, ಕರ್ನಾಟಕ, ಮರಾಠಿ ಕನ್ನಡ ಜಗಳ ಬಿಟ್ಟು ಭಾಷಾ ಬಾಂಧವ್ಯ ಬೆಳೆಯಲು ಎಲ್ಲಾ ರಾಜ್ಯಗಳಲ್ಲಿ ತಮ್ಮ ಮಾತೃ ಭಾಷೆ ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಹೀಗಿದ್ದರೂ ಕೂಡ ಕಾಂಗ್ರೆಸ್‌ನವರು ಸರಿಯಾಗಿ ಎನ್ ಇಪಿಯನ್ನು ಅಧ್ಯಯನ ಮಾಡಿಲ್ಲದಿದ್ದರೂ, ಅಧ್ಯಯನ ವರದಿಯನ್ನು ಮಾಡದಿದ್ದರೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏನೇನು ತಪ್ಪುಗಳಾಗಿವೆ, ಲೋಪದೋಷಗಳಿವೆ ಎಂದು ಹೇಳುತ್ತಿಲ್ಲ. ಯಾವ ರೀತಿಯಲ್ಲಿ ಅವರಿಗೆ ತಪ್ಪಾಗಿ ಕಾಣುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಎನ್‌ಇಪಿ ಬಿಜೆಪಿಯವರು ಜಾರಿಗೆ ತಂದಿದ್ದಾರೆ ಎಂಬ ಕಾರಣಕ್ಕಾಗಿ ಅದನ್ನು ವಿರೋಧಿಸುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಒಂದು ಹೊಸ ಆವಿಷ್ಕಾರದ ಶಿಕ್ಷಣ ನೀತಿಯನ್ನ ವಿರೋಧ ಮಾಡುತ್ತಿದ್ದಾರೆ. ಎಸ್.ಇ.ಪಿ ಅಂತ ಇವರು ಒಂದು ಕಮಿಟಿ ಮಾಡಿದ್ದಾರೆ. ಅಲ್ಲಿರುವವರು ಅರ್ಧಕ್ಕೆ ಅರ್ಧ ನಮ್ಮ ರಾಜ್ಯದವರೇ ಅಲ್ಲ. ಹೊರ ರಾಜ್ಯದವರನ್ನ ನೇಮಕ ಮಾಡಿಕೊಂಡು ಹೆಸರಿಗೆ ಮಾತ್ರ ಎಸ್.ಇ.ಪಿ ಅಂತ ಮಾಡಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಆಟ ಆಡಬೇಡಿ. ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಅಧಿಕಾರ ನಿಮಗೆ ಯಾರು ಕೊಟ್ಟಿಲ್ಲ. ದಲಿತರು, ಹಿಂದುಳಿದ ವರ್ಗಗಳ ನೇತಾರರು ಅಂತ ಕರೆಸಿಕೊಳ್ಳುವ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್, ಎಂಬಿ ಪಾಟೀಲ್‌ರಿಗೆ ಸರ್ಕಾರಿ ಶಾಲೆಯಲ್ಲಿ ಓದುವವರು ದಲಿತ,ಹಿಂದುಳಿದ ವರ್ಗದ ಮಕ್ಕಳು ಎಂಬ ಅರಿವಿದ್ದರೂ, ಅವರೆಲ್ಲಾ ಎನ್‌ಇಪಿ ಶಿಕ್ಷಣದಿಂದ ವಂಚಿತಾಗುವoತೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಬಡ ಮಕ್ಕಳು ಡಿ.ಕೆ ಶಿವಕುಮಾರ್, ಎಂಬಿ ಪಾಟೀಲ್, ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಓದಲಿಕ್ಕೆ ಆಗಲ್ಲ. ಅಲ್ಲಿರುವ ಶಿಕ್ಷಣವೆಲ್ಲಾ ಕೇಂದ್ರ ಸರ್ಕಾರದ ಶಿಕ್ಷಣವೇ. ಆದರೆ ಅದನ್ನು ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಲು ಮಾತ್ರ ಇವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಕರ್ನಾಟಕದ ದಲಿತ, ಹಿಂದುಳಿದ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಕ್ಕಳು ಆಧುನಿಕತೆ ತಂತ್ರಜ್ಞಾನ ಕಲಿಯಬೇಕು. ಎಸ್ ಇಪಿ ಜಾರಿಗೆ ತರಲು ಹೊರಟಿರುವ ನಿರ್ಧಾರ ಈ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!