ಹೊಸದಿಗಂತ ವರದಿ, ಕಲಬುರಗಿ:
ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತಂತೆ ಪೂರ್ವಗ್ರಹಕ್ಕೆ ಒಳಗಾಗಿರುವ ರಾಜ್ಯ ಸರಕಾರ ರಾಜ್ಯದ ಶಿಕ್ಷಣ ಪದ್ಧತಿಯಲ್ಲಿ ಎನ್‍ಇಪಿ ನಿಯಮಗಳನ್ನು ಅಳವಡಿಸದೆ ಇರುವ ತನ್ನ ನಿರ್ಧಾರ ಕೈಬಿಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಒತ್ತಾಯಿಸಿದರು.
ನಗರದಲ್ಲಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಸಮಗ್ರ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ದೇಶದ ಪ್ರಬುದ್ಧ ಚಿಂತಕರು, ಶಿಕ್ಷಣ ತಜ್ಞರು ಸಮಾಲೋಚನೆ ನಡೆಸಿದ ಬಳಿಕವೇ ದೇಶಾದ್ಯಂತ ಎನ್‍ಇಪಿ ಜಾರಿಗೆ ತರಲಾಗಿದೆ. ಆದಾಗ್ಯೂ, ಎನ್‍ಇಪಿ ವಿರುದ್ಧ ರಾಜ್ಯ ಸರಕಾರ ಪೂರ್ವಗ್ರಹಕ್ಕೆ ಒಳಗಾಗಿ ರಾಜ್ಯ ಶಿಕ್ಷಣ ಪದ್ಧತಿಯಲ್ಲಿ ಎನ್‍ಇಪಿ ಜಾರಿಗೊಳಿಸದಿರಲು ನಿರ್ಧರಿಸಿದೆ. ಇದರಿಂದ ಮಕ್ಕಳ ಸಕಾರಾತ್ಮಕ ವ್ಯಕ್ತಿತ್ವ ನಿರ್ಮಾಣ ಮತ್ತು ಮಾನಸಿಕ ವಿಕಾಸಕ್ಕೆ ಅಡ್ಡಿ ಉಂಟಾಗಲಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎನ್‍ಇಪಿ ಅಳವಡಿಕೆಯಿಂದ ಅಂಗನವಾಡಿ ಹಂತದ ಮಕ್ಕಳಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ಅನುಗುಣವಾಗಿ ಬೌದ್ಧಿಕ ವಿಕಾಸ ಮಾಡಿಕೊಳ್ಳಲು ಅವಕಾಶ ದೊರಕಲಿದೆ. ಈ ಅಂಶವನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡು ಪೀಪಲ್ಸ್ ಫೋರಂ ಫಾರ್ ಕರ್ನಾಟಕ ವತಿಯಿಂದ ರಾಜ್ಯದಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿಂಚೋಳಿ ಬಿಜೆಪಿ ಶಾಸಕ ಡಾ.ಅವಿನಾಶ್ ಜಾಧವ್, ಅಣವೀರ ಪಾಟೀಲ್ ಇತರರು ಉಪಸ್ಥಿತರಿದ್ದರು.