ರಾಜ್ಯ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಲಿ: ಬೊಮ್ಮಾಯಿ

ಹೊಸದಿಗಂತ ವರದಿ ಹಾವೇರಿ:

ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದರು. ತಮಿಳುನಾಡಿನಲ್ಲಿ ಈಗ ಅವರ ಮಿತ್ರ ಪಕ್ಷ ಡಿಎಂಕೆ ಅಧಿಕಾರದಲ್ಲಿದೆ. ಅವರ ಜೊತೆಗೆ ೫ನಿಮಿಷ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಅಂತಹ ರಾಜಕೀಯ ಇಚ್ಛಾಶಕ್ತಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ತೋರಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಈಗಾಗಲೇ ಡಿಪಿಆರ್‌ಗೆ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆಯ ಅನುಮತಿ ಅತೀ ಶೀಘ್ರವೇ ಸಿಗಲಿದೆ. ಎತ್ತಿನಹೊಳೆ ಯೋಜನೆಗೆ ಕೇಂದ್ರದ ಯಾವುದೇ ಅನುಮತಿ ಅಗತ್ಯವಿಲ್ಲ.

ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದರು. ಆಗ ನಾವು ಈ ಪ್ರಕರಣ ಅಂತಾರಾಜ್ಯ ವಿವಾದದಲ್ಲಿ ಕೋರ್ಟ್ನಲ್ಲಿದೆ ಅಂತ ಹೇಳಿದಾಗ ಕಾಂಗ್ರೆಸ್ ನಾಯಕರು ತಾವು ಅನುಮತಿ ತರುತ್ತೇವೆ ಎಂದಿದ್ದರು. ಈಗ ಅವರ ಮಿತ್ರ ಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಕೂಡಲೇ ಮಾತನಾಡಿ, ರಾಜಕೀಯ ಇಚ್ಛಾಶಕ್ತಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ತೋರಿಲಿ ಎಂದು ಆಗ್ರಹಿಸಿದರು. ಕೊವಿಡ್ ಹಗರಣದ ಕುರಿತು ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಅವರು ನೀಡಿದ ಮಧ್ಯಂತರ ವರದಿ ಕುರಿತು ಕೇಳಿದ ಪ್ರಶ್ನೆಗೆ ಆ ಬಗ್ಗೆ ವರದಿಯ ವಿವರ ಮಾಹಿತಿ ಇಲ್ಲ ಎಂದು ಹೇಳಿದರು.

ಏ.೧೦ಕ್ಕೆ ಧರಣಿ: ರಾಜ್ಯ ಸರ್ಕಾರದ ಜನ ವಿರೋಧಿ ನೀತಿ, ಬೆಲೆ ಏರಿಕೆ ವಿರುದ್ಧ ಏ.೧೦ರಂದು ಬಿಜೆಪಿ ಹಗಲು ರಾತ್ರಿ ಧರಣಿ ನಡೆಸಲಿದೆ. ಬಿಜೆಪಿ ಸಂಸ್ಥಾಪನೆಯಾಗಿ ೪೫ವರ್ಷಗಳಾಗಿವೆ. ನಮ್ಮ ಹಿರಿಯರು ಕಟ್ಟಿರುವ ಪಕ್ಷವನ್ನು ನಮ್ಮ ಧ್ಯೇಯೋದ್ದೇಶ ಆದರ್ಶಗಳಿಗೆ ಅನುಗುಣವಾಗಿ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿ ನಾವು ಇಂದು ಆಚರಣೆ ಮಾಡಿದ್ದೇವೆ. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದರು.

ಇದೇ ವೇಳೆ ವಕ್ಫ್ ಕಾಯ್ದೆ ಜಾರಿ ಕುರಿತು ಕೇಳಿದ ಪಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದಲ್ಲಿ ರೂಲ್ ಆಫ್ ಲಾ ಸ್ಥಾಪನೆಯಾಗಬೇಕು. ವಕ್ಫ್ ಹೆಸರಿನಲ್ಲಿ ದೇವಸ್ಥಾನ, ಸರ್ಕಾರಿ ಕಚೇರಿಗಳು, ಸಂಸತ್ ಭವನ ವಕ್ಫ್ ಆಸ್ತಿ ಎಂದು ಹೇಳಿದ್ದಾರೆ. ಅವೆಲ್ಲಕ್ಕೂ ತೆರೆ ಬೀಳಲಿದೆ. ಹಲವಾರು ರೈತರಿಗೆ, ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ಅವರು ಸಿವಿಲ್ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ. ಅದಕ್ಕೆ ಕಾನೂನು ಪುನರ್ ಸ್ಥಾಪನೆಯಾಗಲಿದೆ. ಬರುವ ದಿನಗಳಲ್ಲಿ ಎಲ್ಲರಿಗೂ ನ್ಯಾಯ ಕೊಡಲು ನಿರ್ಣಯವಾಗಿದೆ. ಅದು ಜಾರಿಯಾದಾಗ ಎಲ್ಲರಿಗೂ ಅನುಭವಕ್ಕೆ ಬರುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!