ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಹಾವಳಿ ತಡೆಗೆ ಡಿಜಿಪಿ ಪ್ರಣಬ್ ಮೋಹಂತಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದೆ. ವರದಿಯ ಆಧಾರದಲ್ಲಿ ನಿಯಮ ರೂಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಪ್ರಶೋತ್ತರ ಕಲಾಪ ವೇಳೆ ಆನ್‌ಲೈನ್ ಗೇಮಿಂಗ್ ಹಾವಳಿ ವಿಚಾರ ಪ್ರಸ್ತಾಪಿಸಿದ ಶಾಸಕ ಸುರೇಶ್ ಕುಮಾರ್ ಅವರು, ಆನ್‌ಲೈನ್ ಗೇಮ್ ಮಕ್ಕಳಿಗೆ ಪಿಡುಗು ಆಗಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡುವ ರೀತಿಯಲ್ಲಿ ಆನ್‌ಲೈನ್ ಗೇಮ್ ಮುಕ್ತ ಮಾಡಬೇಕು. ಇಲ್ಲದಿದ್ದರೆ ಈ ಆನ್‌ಲೈನ್ ಗೇಮ್‌ಗಳು ಯುವ ಸಮುದಾಯವನ್ನು ಮುಗಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡಲು ಯುವ ಸಮುದಾಯದ ರಕ್ಷಣೆಗೆ ಆನ್‌ಲೈನ್ ಗೇಮ್ ನಿರ್ಬಂಧ ಅಗತ್ಯವಿದ್ದು, ಸುಪ್ರೀಂಕೋರ್ಟ್‌ನಲ್ಲಿ ಇರುವ ಈ ಸಂಬಂಧದ ಪ್ರಕರಣವನ್ನು ಶೀಘ್ರ ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಮಕ್ಕಳನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ನನ್ನ ಮೊಬೈಲ್‌ಗೆ ರಮ್ಮಿ ಆಡಿ ಬಹುಮಾನ ಗೆಲ್ಲಿರಿ ಎಂದು ಸಂದೇಶ ಬಂದಿದೆ. 8 ಸಾವಿರ ಬೋನಸ್ ಇದೆ, 1,62,000 ನಿಮ್ಮ ವ್ಯಾಲೆಟ್‌ನಲ್ಲಿ ಎಂದು ಸಂದೇಶ ಬಂದಿದೆ. ಇದರಿಂದ ಬಹಳಷ್ಟು ಜನ ಪ್ರಚೋದಿತರಾಗಿ ಆಡುತ್ತಾರೆ. ಅಲ್ಲದೇ ಪ್ರಖ್ಯಾತ ಕ್ರೀಡಾಪಟುಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಯುವಕರ ಭವಿಷ್ಯ ಹಾಳು ಮಾಡುವ ವಿಚಾರದಲ್ಲಿ ಆನ್‌ಲೈನ್ ಗೇಮ್‌ಗಳು ಮಾದಕ ವ್ಯಸನಕ್ಕಿಂತ ಹೆಚ್ಚು ಹಾನಿ ಮಾಡುತ್ತಿವೆ. ಇದರ ನಿಯಂತ್ರಣಕ್ಕಾಗಿ 2021ರಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ಕಾಯ್ದೆಗೆ ಅಖಿಲ ಭಾರತ ಗೇಮಿಂಗ್ ಒಕ್ಕೂಟ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದೆ. 2022ರಲ್ಲಿ ಈ ತಿದ್ದುಪಡಿ ಕಾಯ್ದೆ ರದ್ದಾಗಿದೆ. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ ಎಂದು ಹೇಳಿದರು.