ಭ್ರೂಣ ಪತ್ತೆ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರ ಯತ್ನ: ವಿಪಕ್ಷ ನಾಯಕ ಅಶೋಕ್ ಆರೋಪ

ಹೊಸದಿಗಂತ ವರದಿ,ಮಂಡ್ಯ :

ಮಂಡ್ಯದ ಆಲೆಮನೆಯೊಂದರಲ್ಲಿ ಪತ್ತೆಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ಜಿಲ್ಲಾ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು, ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ನಿಯಮಾನುಸಾರ ತನಿಖೆ ನಡೆಸಿಲ್ಲ. ಇದುವರೆಗೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದ ಆಲೆಮನೆಯನ್ನು ಜಪ್ತಿ ಮಾಡಿಲ್ಲ. ಅಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಆಲೆಮನೆ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ನಿರ್ಲಕ್ಷಿಸಿವೆ. ನಿಯಮಬದ್ಧವಾಗಿ ತನಿಖೆ ನಡೆಸಿದ್ದರೆ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಾಗಿತ್ತು. ಸಾಕ್ಷ್ಯ ನಾಶಕ್ಕೆ ಅಧಿಕಾರಿಗಳೇ ಎಡೆಮಾಡಿಕೊಟ್ಟಿದ್ದಾರೆ ಎಂದು ದೂಷಿಸಿದರು.

ಸಾಕ್ಷ್ಯ ನಾಶಕ್ಕೆ ಅವಕಾಶ :
ಆಲೆಮನೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದರಿಂದ ಸ್ಕ್ಯಾನ್ ಮಾಡುವ ಮೊದಲಿಗೆ ಜೆಲ್ ಹಚ್ಚುತ್ತಾರೆ. ಗ್ಲೌಸ್‌ಗಳನ್ನು ಹಾಕಿಕೊಂಡಿರುತ್ತಾರೆ. ಜೆಲ್ ಒರೆಸಿ ಎಸೆದ ಹತ್ತಿಗಳು, ಗ್ಲೌಸ್ಗ್‌ಗಳು, ಗೋಡೆಯ ಮೇಲೆ ಅಂಟಿರಬಹುದಾದ ಜೆಲ್, ಗರ್ಭಿಣಿ ಸೀಯರಿಗೆ ಬಳಸಿ ಬಿಸಾಡಿರುವ ಬಟ್ಟೆಗಳು, ಪ್ರಿಸ್‌ಕ್ರಿಪ್ಷನ್‌ಗಳು, ಟ್ಯಾಬ್ಲೆಟ್‌ಗಳು ಹೀಗೆ ಅನೇಕ ಮಾದರಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕೆ ಅವಕಾಶಗಳಿದ್ದರೂ ಆರೋಗ್ಯ ಇಲಾಖೆಯವರು ಕೈಚೆಲ್ಲಿ ಕುಳಿತಿದ್ದಾರೆ. ಒಮ್ಮೆ ಸಾಕ್ಷ್ಯಗಳು ಸಿಕ್ಕಿದ್ದರೂ ಅವುಗಳನ್ನು ಅವರೇ ನಾಶಪಡಿಸಿರುವ ಸಾಧ್ಯತೆಗಳಿವೆ. ತಜ್ಞ ವೈದ್ಯರು, ತಂತ್ರಜ್ಞರನ್ನು ಸ್ಥಳಕ್ಕೆ ಕರೆಸಿ ಸಮಗ್ರವಾಗಿ ಪರಿಶೀಲನೆ ನಡೆಸಿದ್ದರೆ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಿತ್ತು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯವರು ಕಾರ್ಯಪ್ರವೃತ್ತರಾಗದ ಕಾರಣ ಆರೋಪಿಗಳು ಪ್ರಕರಣ ಬೆಳಕಿಗೆ ಬಂದ 20 ದಿನಗಳಲ್ಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದು ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಅಧಿಕಾರಿಗಳ ವಸೂಲಿ ಕೇಂದ್ರಗಳು :
ಈಗ ಆಲೆಮನೆಯಲ್ಲಿ ಬೆಲ್ಲದ ಸ್ಟೋರೇಜ್ ಮಾಡಿಕೊಂಡಿದ್ದಾರೆ. ಅಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಬಗ್ಗೆ ನ್ಯಾಯಾಲಯಕ್ಕೆ ಈಗ ಏನು ಸಾಕ್ಷ್ಯಗಳನ್ನು ಕೊಡಲು ಸಾಧ್ಯ. ಆರೋಗ್ಯ ಇಲಾಖೆಯವರು ಸ್ಕ್ಯಾನಿಂಗ್ ಸೆಂಟರ್‌ಗಳನ್ನು ವಸೂಲಿ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಕೂಡಲೇ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!