ಹೊಸದಿಗಂತ ವರದಿ ಬಳ್ಳಾರಿ:
ಉತ್ತಮ, ಸದೃಢ ಆರೋಗ್ಯಕ್ಕಾಗಿ ಕ್ರೀಡೆ ಸಹಕಾರಿಯಾಗಲಿದೆ, ಜೊತೆಗೆ ಆನಂದಕ್ಕಾಗಿ ಕ್ರೀಡೆ ಅತ್ಯವಶ್ಯವಾಗಿದೆ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಜಿಲ್ಲಾ ಅಸೋಸಿಯೇಷನ್ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆರೋಗ್ಯ ಜೊತೆಗೆ ದೇಹಕ್ಕೆ ಹೊಸ ಚೈತನ್ಯ ಬರಲಿದೆ. ಕ್ರಿಕೆಟ್, ವಾಲಿಬಾಲ್, ಖೊಖೊ ಯಾವುದೇ ಕ್ರೀಡೆಗಳು ಇರಲಿ ಭಾಗವಹಿಸುವುದು ಮುಖ್ಯ, ಕ್ರೀಡೆ ಅಂದ್ಮೇಲೆ ಸೋಲು ಗೆಲುವು ಸಹಜ, ಕ್ರೀಡಾಪಟುಗಳು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ಆರೋಗ್ಯ ಸದೃಢವಾಗಿರಲಿದೆ. ಪ್ರತಿಯೋಬ್ಬರೂ ಯಾವುದೇ ಕ್ರೀಡೆಗಳಿರಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು, ಅಚ್ಚುಕಟ್ಟಾಗಿ ಆಯೋಜಿಸಿದ ರಾಜ್ಯ ಮಟ್ಟದ ಈ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಬೇಕು, ಈ ಸ್ಮರಣೀಯ ಕ್ಷಣಗಳು ನಿಮ್ಮದಾಗಲಿ, ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಸರು ಮಾಡಿ ಎಂದು ಹಾರೈಸಿದರು.
ನಾನು ಬಾಲ್ಯದಲ್ಲಿ ಬ್ಯಾಡ್ಮಿಂಟನ್ ಹೆಚ್ಚು ಆಡುತ್ತಿದ್ದೆ. ದೈಹಿಕ ದಣಿಕೆಗೆ ಬ್ಯಾಡ್ಮಿಂಟನ್ ಅತ್ಯುತ್ತಮ ಆಟ. ಬಳ್ಳಾರಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯುತ್ತಿರುವುದು ವೈಯುಕ್ತಿಕವಾಗಿ ನನಗೆ ಅತ್ಯಂತ ಸಂತಸ ತಂದಿದೆ. ಪ್ರತಿಯೋಬ್ಬ ಕ್ರೀಡಾಪಟುಗಳು ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡಿ, ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.
ಬಳ್ಳಾರಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಮತ್ತಿಹಳ್ಳಿ ಅಹಿರಾಜ್ ಅವರು ಮಾತನಾಡಿ, ಅಸೋಸಿಯೇಷನ್ ವತಿಯಿಂದ ಇಲ್ಲಿವರೆಗೆ ಹಮ್ಮಿಕೊಂಡಿರುವ ಕ್ರೀಡಾ ಚಟುವಟಿಕೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಅಸೋಯೇಷನ್ ನ ಮಾಜಿ ಅಧ್ಯಕ್ಷ ಜೆ.ಎಸ್. ಬಸವರಾಜ್ ಮಾತನಾಡಿದರು. ಡಾ.ರಾಧಿಕಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.