ಹೊಸದಿಗಂತ ವರದಿ, ಬಳ್ಳಾರಿ:
ಹಂಪಿಯಲ್ಲಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎಎ ಪುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ವಿವೇಕಾನಂದ ಯುವಕ ಸಂಘ ಹಾಗೂ ಸ್ಥಳೀಯ ಯುವಕ ಸಂಘಗಳ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ-2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಸಬಲೀಕರಣ ಇಲಾಖೆಯಿಂದ ಯುವಜನರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಧಿವೃದ್ಧಿಗಾಗಿ ರಾಜ್ಯ ಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರ ಸ್ಥಾಪನೆಗೆ ಬೇಕಾದ 20 ಎಕರೆ ಜಾಗವನ್ನು ಹಂಪಿ ಅಥವಾ ಬಳ್ಳಾರಿ ಭಾಗದಲ್ಲಿ ಗುರುತಿಸಲಾಗುವುದು, ಅದೇ ರೀತಿಯಾಗಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371-ಜೆ ಅಡಿಯಲ್ಲಿ ಯುವಕ ಯುವತಿಯರು ಸರ್ಕಾರದ ಸೌಲಭ್ಯ ಪಡೆದುಕೊಂಡು ಶೈಕ್ಷಣಿಕವಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಂತರದಲ್ಲಿ ವಿವಿಧ ಶಾಲಾ – ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಕಥೆ ಬರೆಯುವುದು, ಪೋಸ್ಟರ್ ಮೇಕಿಂಗ್, ಘೋಷಣೆ, ಛಾಯಾಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕ್ರಮವಾಗಿ ಬಹುಮಾನ ವಿತರಿಸಲಾಯಿತು. ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಮಹಾನಗರ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ವಿವೇಕ್, ಶ್ವೇತಾ ಸೋಮಶೇಖರ್, ರಾಜೇಶ್ವರಿ ಸುಬ್ಬರಾಯುಡು ಸೇರಿದಂತೆ ಇತರರು ಉಪಸ್ಥಿತರಿದ್ದರು.