ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ನಾಯಕರು ಒಂದು ಕಡೆ ದೇಶವನ್ನು ಒಡೆಯುವ ಹೇಳಿಕೆ, ಇನ್ನೊಂದೆಡೆ ದೇಶದ್ರೋಹಿ ಶಕ್ತಿಗಳಿಗೆ ಕುಮ್ಮಕ್ಕು ನಿಡುತ್ತಿದ್ದು, ಯಾವತ್ತು ಕಾಂಗ್ರೆಸ್ ಪಕ್ಷದಿಂದ ಈ ದೇಶ, ನಾಡನ್ನು ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ದೇಶದ ಭದ್ರತೆಯನ್ನು ಅಡ ಇಡುವಂತಹ ಕೆಲಸವನ್ನು ಮಾಡುತ್ತಿದೆ. ಮುಖ್ಯಮಂತ್ರಿ ಅವರು ಮತ ಬ್ಯಾಂಕ್ ಓಲೈಕೆ ರಾಜಕಾರಣದ ಮುಸುಕು ಹಾಕಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬೇರೆ ಏನೂ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೇಶದ್ರೋಹಿಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು , ಅವರಿಗೆ ಧೈರ್ಯ ಬಂದಿದೆ ಎಂದು ಹೇಳಿದರು.
ವಿಧಾನಸೌಧದಕ್ಕೆ ಬಂದು ದೇಶದ್ರೋಹದ ಘೋಷಣೆ ಕೂಗಲು ಈ ಸರ್ಕಾರ ನೀಡಿರುವ ಪ್ರೋತ್ಸಾಹ ಕಾರಣ. ನಮ್ಮ ಸರ್ಕಾರ ಇದ್ದಾಗ ಇಂತಹ ಶಕ್ತಿಗಳನ್ನು ಸದೆಬಡಿದಿದ್ದೆವು ಎಂದರು. ಜನ ಎಚ್ಚೆತ್ತುಕೊಂಡು ಎಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೋ ಅಷ್ಟು ಬೇಗ ಈ ನಾಡು ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.