January21, 2026
Wednesday, January 21, 2026
spot_img

ಸೂಕ್ತ ಸಮಯದಲ್ಲಿ ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಗೊಂದಲಕ್ಕೆ ತೆರೆ ಎಳೆದ ಲೆಫ್ಟಿನೆಂಟ್ ಗವರ್ನರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗಲಿದೆ ಎಂದು ಲೆಫ್ಟಿನೆಂಟ್ ಗವರ್ನರ್​ ಮನೋಜ್​ ಸಿನ್ನಾ ಹೇಳಿದ್ದಾರೆ.

ಈ ಮೂಲಕ ರಾಜ್ಯ ಸ್ಥಾನಮಾನ ಪುನರ್​ಸ್ಥಾಪನೆ ಮಾಡುವ ಕುರಿತು ಹರಡುತ್ತಿರುವ ಊಹಾಪೋಹಗಳನ್ನು ತಳ್ಳಿ ಹಾಕಿದ್ದು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಈಗಾಗಲೇ ಮಾರ್ಗಸೂಚಿ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.

ಇಂದು ಶ್ರೀನಗರದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗೃಹ ಸಚಿವರ ನಿಲುವು ಬದಲಾಗುವುದಿಲ್ಲ. ಮೊದಲಿಗೆ ಕ್ಷೇತ್ರ ಪುನರ್‌ವಿಂಗಡಣೆ, ಅದಾದ ನಂತರ ವಿಧಾನಸಭಾ ಚುನಾವಣೆಗಳು ಮತ್ತು ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗುತ್ತದೆ ಎಂದರು.

ಈ ವಿಚಾರದ ಕೆಲವು ಜನರು ಸಾರ್ವಜನಿಕರಿಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಬಗ್ಗೆ ನಾನು ಸ್ಪಷ್ಟಪಡಿಸುತ್ತೇನೆ. ಕೇಂದ್ರಾಡಳಿತ ಸರ್ಕಾರ ಈಗಾಗಲೇ ಸಾಕಷ್ಟು ಅಧಿಕಾರವನ್ನು ಹೊಂದಿದೆ. ಈ ಅಧಿಕಾರವನ್ನು ಗೊಂದಲ ಹರಡುವ ಬದಲಾಗಿ ಸಾರ್ವಜನಿಕ ಕಲ್ಯಾಣಕ್ಕೆ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಅಕ್ಟೋಬರ್​ 31 ಅನ್ನು ಹೊಸ ಜಮ್ಮು ಮತ್ತು ಕಾಶ್ಮೀರದ ಉದಯ ಎಂದಿರುವ ಸಿನ್ನಾ, ಇದು ಭಯ, ಪ್ರತ್ಯೇಕತೆ ಮತ್ತು ತಾರತಮ್ಯದ ಅಂತ್ಯದ ಸಂಕೇತ. ಶಾಂತಿ, ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಆರಂಭ ಎಂದು ಬಣ್ಣಿಸಿದರು.

ಆರು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ ಭಾರತೀಯ ಸಂಸತ್ತಿನಲ್ಲಿರುವ ಕಾನೂನನ್ನು ಜಮ್ಮು ಮತ್ತು ಕಾಶ್ಮೀರದಲ್ಲೂ ಜಾರಿಗೆ ತರುವ ಮೂಲಕ ಇತಿಹಾಸ ನಿರ್ಮಿಸಲಾಗಿತ್ತು.ಈ ಪ್ರದೇಶವನ್ನು ವಿಭಜಿಸಲು ಯಾರು ಪಿತೂರಿ ನಡೆಸಿದ್ದರು ಎಂಬ ಕುರಿತು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Must Read