ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಸ್ತವ್ಯಸ್ತಗೊಳಿಸಲು ಕೇರಳದ ಕಣ್ಣೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರವೊಂದರ ಪರಿಸರದ ರಹಸ್ಯ ಕೇಂದ್ರದಲ್ಲಿ ಶತ್ರು ಭೈರವಿ ಯಾಗ ಮತ್ತು ಪ್ರಾಣಿಬಲಿ ನಡೆಸಲಾಗಿದೆ ಎಂಬ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರ ಹೇಳಿಕೆಯು ವಿವಾದದ ಸುಳಿಯಲ್ಲಿ ಸಿಲುಕಿರುವ ಮಧ್ಯೆಯೇ ಕರ್ನಾಟಕ ಇಂಟೆಲಿಜೆನ್ಸ್ ವಿಭಾಗವು ಕಣ್ಣೂರಿಗೆ ಆಗಮಿಸಿ ಸಮಗ್ರ ತನಿಖೆ ನಡೆಸಿದೆ.
ಆದರೆ ಕಣ್ಣೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರದಲ್ಲಿ ಯಾಗ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಕರ್ನಾಟಕ ಇಂಟೆಲಿಜೆನ್ಸ್ ವಿಭಾಗಕ್ಕೆ ಸಾಧ್ಯವಾಗಿಲ್ಲವೆಂದು ತಿಳಿದುಬಂದಿದೆ. ಈ ಮಧ್ಯೆ ಕೇರಳ ಪೊಲೀಸ್ ಇಂಟೆಲಿಜೆನ್ಸ್ ವಿಭಾಗವು ಪ್ರತ್ಯೇಕವಾಗಿ ನಡೆಸಿದ ತನಿಖೆಯಲ್ಲೂ ಕಣ್ಣೂರಿನ ಕ್ಷೇತ್ರದಲ್ಲಿ ಅಂತಹ ಯಾಗವನ್ನು ನಡೆಸಲಾಗಿಲ್ಲವೆಂದು ತಿಳಿಸಲಾಗಿದೆ.
ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯಲ್ಲಿ ಕಣ್ಣೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರವೊಂದರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ ಇದೇ ವೇಳೆ ಆ ಕ್ಷೇತ್ರವೊಂದರ ಬಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದ ರಹಸ್ಯ ಕೇಂದ್ರದಲ್ಲಿ ಯಾಗ ನಡೆಸಿರುವುದಾಗಿಯೂ ಡಿಕೆಶಿ ಮತ್ತೆ ತಿಳಿಸಿದ್ದಾರೆ.
ಈ ನಡುವೆ ಕಣ್ಣೂರು ಜಿಲ್ಲೆಯ ತಳಿಪರಂಬ ಕ್ಷೇತ್ರದ ಪದಾಧಿಕಾರಿಗಳು ಕ್ಷೇತ್ರಕ್ಕೆ ಸಂಬಂಧಿಸಿ ಶತ್ರು ಭೈರವಿ ಯಾಗವನ್ನು ನಡೆಸಲಾಗುವುದಿಲ್ಲ. ಅಲ್ಲದೆ ಪ್ರಾಣಿಬಲಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಈ ವಿಷಯಕ್ಕೆ ಸಂಬಂಧಿಸಿ ಕೇರಳ ದೇವಸ್ವಂ ಖಾತೆ ಸಚಿವ ಕೆ.ರಾಧಾಕೃಷ್ಣನ್ ಪ್ರತಿಕ್ರಿಯಿಸಿದ್ದು , ಡಿ.ಕೆ.ಶಿವಕುಮಾರ್ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕೇರಳದ ಯಾವ ಕ್ಷೇತ್ರದಲ್ಲಿಯೂ ಶತ್ರು ಭೈರವಿ ಯಾಗವು ನಡೆಯುದಿಲ್ಲ. ಒಂದು ವೇಳೆ ಈ ರೀತಿ ಏನಾದರೂ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಈ ಮಧ್ಯೆ ಕೇರಳ ಉನ್ನತ ಶಿಕ್ಷಣ ಖಾತೆ ಸಚಿವೆ ಡಾ.ಆರ್.ಬಿಂದು ಕೂಡಾ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯರಿಂದ ತಳಿಪರಂಬ ಕ್ಷೇತ್ರಕ್ಕೆ ಚಿನ್ನದ ಕೊಡೆ ಸಮರ್ಪಣೆ
ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಶತ್ರು ಭೈರವಿ ಯಾಗ ಮತ್ತು ಮೃಗಬಲಿ ಹೇಳಿಕೆ ವಿವಾದವಾದ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳಿಪರಂಬ ಶ್ರೀ ರಾಜರಾಜೇಶ್ವರ ಕ್ಷೇತ್ರಕ್ಕೆ ಚಿನ್ನದ ಕೊಡೆ ಸಮರ್ಪಿಸಿರುವುದಾಗಿ ತಿಳಿದುಬಂದಿದೆ.
ಮೇ 27 ಮತ್ತು 28 ರ ದಿನಗಳಲ್ಲಿ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿ ಗೋವಿಂದರಾಜ್ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಚಿನ್ನದ ಕೊಡೆ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಮೇ 27 ಮತ್ತು 28 ರಂದು ಕಾಸರಗೋಡು ಜಿಲ್ಲೆಯ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಸಿದ್ಧ ದೈವಸ್ಥಾನವೊಂದರಲ್ಲಿ ನಡೆದ ಕಳಿಯಾಟ ಮಹೋತ್ಸವದ ಸಂದರ್ಭ ಹೆಸರಾಂತ ಕುಟುಂಬವೊಂದರ ನೇತೃತ್ವದಲ್ಲಿ ವಾಮಾಚಾರ ನಡೆಸಲಾಗಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.