ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಕಳ್ಳ ಸಾಗಣೆ ಕೇಸ್‌ನ ಬಂಧನವಾಗಿರುವ ನಟಿ ರನ್ಯಾ ರಾವ್ ವಿರುದ್ಧ ವಿವಾದಾತ್ಮಕ ಪದ ಬಳಕೆ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿದ್ದ ಪೊಲೀಸ್ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಶಾಸಕ ಯತ್ನಾಳ್ ಅವರು ಮಾಧ್ಯಮಗಳ ಬಳಿ ಮಾತನಾಡುವಾಗ ನೀಡಿದ್ದ ಹೇಳಿಕೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನಟಿ ರನ್ಯಾ ರಾವ್ ಪರವಾಗಿ ಅಕುಲ ಅನುರಾಧ ಎಂಬುವವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 79 ಅಡಿ ಎಫ್ ಐ ಆರ್ ದಾಖಲಾಗಿತ್ತು.
ಎಫ್ ಐ ಆರ್ ರದ್ದತಿ ಕೋರಿ ಬಿಜೆಪಿಯ ಯತ್ನಾಳ್ ಕರ್ನಾಟಕ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಶಾಸಕ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ಕೋರ್ಟ್‌ಗೆ ಹಾಜರಾಗಿದ್ದು, ರನ್ಯಾ ಪರ ವಕೀಲ ಮಹೇಶ್ ವೈ ಎನ್ ವಾದ ಮಂಡಿಸಿದರು.
ಇಬ್ಬರೂ ವಕೀಲರ ವಾದ – ಪ್ರತಿವಾದ ಆಲಿಸಿದ ಹೈಕೋರ್ಟ್, ಶಾಸಕ ಯತ್ನಾಳ್ ವಿರುದ್ದ ಹೈಗ್ರೌಂಡ್ಸ್ ಠಾಣೆಯಲ್ಲಿ ನಟಿ ರನ್ಯಾ ಸಂಬಂಧಿ ದಾಖಲಿಸಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ವಿಧಿಸಿತು. ಇನ್ನು ಈ ಕೇಸ್‌ನ ವಿಚಾರಣೆಯನ್ನು ಏಪ್ರಿಲ್ 28 ಕ್ಕೆ ಮುಂದೂಡಿದೆ.