ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾಷೆಯ ಮೇಲಿನ ರಾಜಕೀಯವನ್ನು ಮುಂದುವರೆಸುತ್ತಿರುವ ನಾಯಕರು ಇರುವ ರಾಜ್ಯಗಳು ಕ್ರಮೇಣ ಅವನತಿಯತ್ತ ಸಾಗುತ್ತಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಭಾಷೆಯ ಬಗ್ಗೆ ವಿವಾದ ಸೃಷ್ಟಿಸುವ ಜನರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಬಹುದು. ಆದರೆ, ಒಂದು ರೀತಿಯಲ್ಲಿ ಯುವಕರಿಗೆ ಉದ್ಯೋಗಾವಕಾಶಗಳಿಗೆ ಹೊಡೆತ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಉಲ್ಲೇಖಿಸಿ ಎಂದು ಹೇಳುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಯಾರೇ ಆಗಿರಲಿ, ಅವರು ಯುವಕರ ಉದ್ಯೋಗಾವಕಾಶಗಳಿಗೆ ಹೊಡೆತ ನೀಡುತ್ತಿದ್ದಾರೆ. ಆ ರಾಜ್ಯಗಳು ಕ್ರಮೇಣ ಅವನತಿಯತ್ತ ಸಾಗಲು ಇದುವೇ ಕಾರಣ. ಅವರಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಮತ್ತು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಲು ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ ಎಂದರು.
ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಳಿ ಅಥವಾ ಮರಾಠಿಯಂತಹ ಭಾಷೆಗಳು ರಾಷ್ಟ್ರೀಯ ಏಕತೆಯ ಮೂಲಾಧಾರ. ಉತ್ತರ ಪ್ರದೇಶ ಸರ್ಕಾರವು ವಿದ್ಯಾರ್ಥಿಗಳಿಗೆ ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಳಿ ಮತ್ತು ಮರಾಠಿ ಮುಂತಾದ ಭಾಷೆಗಳನ್ನು ಕಲಿಸುತ್ತಿದೆ ಎಂದು ತಿಳಿಸಿದರು.
ಹಿಂದಿ ಭಾಷೆಯನ್ನು ಗೌರವಿಸಬೇಕು ಎಂದು ಎಲ್ಲರೂ ಒಪ್ಪುತ್ತಿದ್ದರೂ, ಭಾರತ ಅಧಿಕೃತವಾಗಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದೆ. ಈ ತ್ರಿಭಾಷಾ ಸೂತ್ರವು ಪ್ರಾದೇಶಿಕ ಭಾಷೆಗಳಿಗೂ ಅದೇ ಗೌರವವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ವಿಶೇಷತೆ ಇದ್ದು, ಅದು ರಾಷ್ಟ್ರೀಯ ಏಕತೆಯ ಮೂಲಾಧಾರವಾಗುತ್ತದೆ ಎಂದು ಹೇಳಿದರು.