March 3, 2026
Tuesday, March 3, 2026
spot_img

ಸರ್ ಎಂವಿ ಕಾರ್ಖಾನೆ ಪುನಶ್ಚೇತನಕ್ಕೆ ‘ಸ್ಟೀಲ್’ ಸಂಕಲ್ಪ: ಭದ್ರಾವತಿಗೆ ಕೇಂದ್ರ ಸಚಿವ HDK ಭೇಟಿ

ಹೊಸದಿಗಂತ ಶಿವಮೊಗ್ಗ:

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ಐತಿಹಾಸಿಕ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಎರಡನೇ ಬಾರಿಗೆ ಭೇಟಿ ನೀಡಿ, ಕಾರ್ಖಾನೆಯ ಪುನಶ್ಚೇತನದ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸಿದರು.

ಉಕ್ಕು ಸಚಿವರಾದ ನಂತರ ಕಾರ್ಖಾನೆಗೆ ಕುಮಾರಸ್ವಾಮಿ ಅವರ ಈ ಎರಡನೇ ಭೇಟಿಯು, ಕಾರ್ಖಾನೆಯ ಭವಿಷ್ಯದ ಬಗ್ಗೆ ನರೇಂದ್ರ ಮೋದಿ ಸರ್ಕಾರಕ್ಕಿರುವ ಗಂಭೀರತೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಾಂತ್ರಿಕ ತಂಡದೊಂದಿಗೆ ಸಚಿವರು ಈ ಮಹತ್ವದ ಭೇಟಿ ನೀಡಿದರು.

ಅಧಿಕಾರಿಗಳೊಂದಿಗೆ ಸರಣಿ ಸಭೆ:

ಕಾರ್ಖಾನೆಗೆ ಆಗಮಿಸಿದ ಕೂಡಲೇ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದ ಸಚಿವರು, ವಿವಿಧ ಯೋಜನೆಗಳು, ಪ್ರಸ್ತುತ ಪರಿಸ್ಥಿತಿ, ಉತ್ಪಾದನಾ ಮಟ್ಟ ಮತ್ತು ವೆಚ್ಚದ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಬಳಿಕ, ಕಾರ್ಖಾನೆಯ ವಿವಿಧ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯಕ್ಷಮತೆಯನ್ನು ಖುದ್ದು ಪರಿಶೀಲಿಸಿದರು.

ತದನಂತರ, ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸುದೀರ್ಘ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರು, ಕಾರ್ಖಾನೆಯನ್ನು ಉಳಿಸಲು ಇರುವ ಮಾರ್ಗೋಪಾಯಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಭೆಯಿಂದಲೇ ಅವರು ಭಾರತೀಯ ಉಕ್ಕು ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಕೆಲ ಮಹತ್ವದ ಮಾಹಿತಿಗಳನ್ನು ಪಡೆದುಕೊಂಡರು.

ಕಾರ್ಮಿಕರಿಗೆ ಅಭಯ:

ಕಾರ್ಖಾನೆಯ ಪುನಶ್ಚೇತನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರ ಬಳಿ ತೆರಳಿದ ಸಚಿವರು, ಆತಂಕದಲ್ಲಿರುವವರಿಗೆ ಧೈರ್ಯ ತುಂಬಿ ಭರವಸೆ ನೀಡಿದರು.

“ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ಸರ್ ಎಂ ವಿಶ್ವೇಶ್ವರಯ್ಯನವರು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ ಈ ಕಾರ್ಖಾನೆ, ರಾಷ್ಟ್ರದ ಉಕ್ಕು ಕ್ಷೇತ್ರಕ್ಕೆ ಅತಿ ದೊಡ್ಡ ಕೊಡುಗೆ ನೀಡಿದೆ. ಹೀಗಾಗಿ, ಹೇಗಾದರೂ ಮಾಡಿ ಕಾರ್ಖಾನೆಯನ್ನು ಉಳಿಸುವ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ನಾನು ಸಚಿವನಾದ ಬಳಿಕ ಇದು ಎರಡನೇ ಭೇಟಿಯಾಗಿದ್ದು, ಕೇಂದ್ರ ಸರ್ಕಾರ ಈ ಕಾರ್ಖಾನೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಇದುವೇ ಸಾಕ್ಷಿ,” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ಕು ಕ್ಷೇತ್ರದ ಬಲವರ್ಧನೆಗೆ ಮತ್ತು ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಅತಿಹೆಚ್ಚು ಮಹತ್ವ ನೀಡುತ್ತಿದ್ದಾರೆ. ಈ ಗುರಿ ಸಾಧನೆಗೆ ತಾವೆಲ್ಲರೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು, ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕಗೊಳ್ಳಬಾರದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸಹ ಹಾಜರಿದ್ದು, ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಸಚಿವರೊಂದಿಗೆ ಹಂಚಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !