ಸರೋಜಾದೇವಿ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರೋಜಾದೇವಿ ಅವರ ಕಲಾಸೇವೆಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

ನಾವೆಲ್ಲರೂ ಇಂದು ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಇವರು ದಕ್ಷಿಣ ಭಾರತದ ಖ್ಯಾತ ನಟರ ಜತೆ ತಲಾ 20 ರಿಂದ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರವಾದ ಕೀರ್ತಿ ಸಂಪಾದಿಸಿದ್ದಾರೆ. ಇಡೀ ಕರ್ನಾಟಕ ಸರ್ಕಾರ, ದಕ್ಷಿಣ ಭಾರತದ ಕಲಾವಿದರು ಅವರಿಗೆ ಗೌರವಪೂರ್ವಕವಾಗಿ ನಮನ ಅರ್ಪಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಸರೋಜಾದೇವಿ ಅವರು ನನಗೆ ಸಣ್ಣ ವಯಸ್ಸಿನಿಂದಲೂ ಬಹಳ ಪರಿಚಯ. ನಾನು ಆರಂಭದಲ್ಲಿ ಸಚಿವನಾದಾಗ, ನನ್ನನ್ನು ಕರೆದು ನೀನು ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂದು ಹೇಳಿದ್ದರು. ಅವರು ನಮ್ಮ ಜಿಲ್ಲೆಯವರು. ಅವರ ಅಂತಿಮ ಸಂಸ್ಕಾರವನ್ನು ಇಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯುತ್ತವೆ. ಬಹಳ ಚಿಕ್ಕ ವಯಸ್ಸಿಗೆ ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಕಾಲದಲ್ಲಿ ಆ ವಯಸ್ಸಿಗೆ ಯಾರೂ ಆ ಪ್ರಶಸ್ತಿ ಪಡೆದಿರಲಿಲ್ಲ. ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲು ರಸ್ತೆಗಳಿಗೆ ಅವರ ಹೆಸರಿಡುವ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ನಮ್ಮ ಶಾಸಕರಾದ ಯೋಗೇಶ್ವರ್ ಅವರು ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಡಿಎ ಅಥವಾ ಪಾಲಿಕೆಯಲ್ಲಿ ಈ ವಿಚಾರ ಚರ್ಚೆ ಮಾಡಿ ಈ ಕೆಲಸ ಮಾಡುತ್ತೇವೆ ಎಂದರು.

ಅವರ ಪ್ರತಿಮೆ ನಿರ್ಮಾಣ ಮಾಡಲಾಗುವುದೇ ಎಂದು ಕೇಳಿದಾಗ, ಪ್ರತಿಮೆ ಮುಖ್ಯವಲ್ಲ. ಅವರ ವಿಚಾರದಲ್ಲಿ ಏನು ಮಾಡಬೇಕು ಎಂಬುದುನ್ನು ನಾವು ಚರ್ಚೆ ಮಾಡಿ ತಿಳಿಸುತ್ತೇವೆ. ಅವರ ಹೆಸರು ಉಳಿದುಕೊಳ್ಳುವಂತೆ ಏನುಬೇಕೋ ಅದನ್ನು ಮಾಡುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!