ಹೊಸದಿಗಂತ ವರದಿ,ವಿಜಯಪುರ:
ನಗರದ ಗಣಪತಿ ಚೌಕ್ ನಲ್ಲಿನ ಗಣಪತಿ ದೇವಸ್ಥಾನಕ್ಕೆ ಕಲ್ಲು ಎಸೆದು ಗಾಜಿಗೆ ಹಾನಿ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಟಕ್ಕೆಯ ಸೊಹೆಲ್ ಮುನ್ನಾ ಜಮಾದಾರ (21) ಬಂಧಿತ ಆರೋಪಿ.
ಸೊಹೆಲ್ ಜಮಾದಾರ ಈತ ಸೇರಿದಂತೆ ಇನ್ನೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ನಗರದ ಗಣಪತಿ ವೃತ್ತದ ಗಣಪತಿ ಗುಡಿಗೆ ಕಲ್ಲು ಎಸೆದು, ಗುಡಿಯ ಗಾಜನ್ನು ಪುಡಿಪುಡಿ ಮಾಡಿರುವ ದುಷ್ಕೃತ್ಯ ಎಸೆಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇಲ್ಲಿನ ಸಿದ್ಧೇಶ್ವರ ದೇವಸ್ಥಾನ ಬಳಿಯ ಗಣಪತಿ ಚೌಕ್ ನಲ್ಲಿ ಚತುರ್ಮುಖ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಕೆಲ ವರ್ಷಗಳ ಹಿಂದೆ ಈ ದೇವಸ್ಥಾನ ನವೀಕರಿಸಲಾಗಿದೆ.
ಎಸ್ಪಿ ರಿಷಿಕೇಶ ಸೋನಾವಣೆ ಮಾರ್ಗದರ್ಶನದಲ್ಲಿ, ಗಾಂಧಿಚೌಕ್ ಪೊಲೀಸ್ ಠಾಣೆ ಸಿಪಿಐ ಪ್ರದೀಪ ತಳಕೇರಿ, ಪಿಎಸ್ಐ ರಾಜು ಮಮದಾಪುರ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದೆ.
ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.