October 11, 2026
Sunday, October 11, 2026
spot_img

ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ; ಇಬ್ಬರ ಬಂಧನ, ಮತ್ತೊಬ್ಬನಿಗಾಗಿ ಶೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ್ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಉತ್ತರ ಪ್ರದೇಶದ ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುರುವಾರ ರಾತ್ರಿ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಘಟನೆಯಲ್ಲಿ ಎಸಿ ಕೋಚ್‌ನ ಕಿಟಕಿಗೆ ಹಾನಿಯಾಗಿದ್ದು, ಅದೇ ಬೋಗಿಯಲ್ಲಿ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲು ಕಿಟಕಿಗೆ ಬಡಿದ ವೇಳೆ ಮೋಹನ್ ಭಾಗವತ್ ಅವರು ಕಿಟಕಿಯಿಂದ ದೂರ ಕುಳಿತಿದ್ದ ಕಾರಣ ಯಾವುದೇ ಗಾಯಗಳಾಗಿಲ್ಲ. ಘಟನೆಯ ನಂತರ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ವೇಳೆ ಮೂವರು ಕಲ್ಲು ತೂರಾಟದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಮತ್ತೊಬ್ಬನ ಪತ್ತೆಗೆ ವಿಶೇಷ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ. ಕಲ್ಲು ತೂರಾಟ ಉದ್ದೇಶಪೂರ್ವಕವಾಗಿ ನಡೆದಿತ್ತೇ ಅಥವಾ ಹಳಿಯ ಪಕ್ಕದಿಂದ ಸಾಮಾನ್ಯವಾಗಿ ಕಲ್ಲು ಎಸೆದ ಪರಿಣಾಮ ಈ ಘಟನೆ ಸಂಭವಿಸಿತ್ತೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read