ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ ಮತ್ತು ಅನ್ವೇಷಣೆಯ ವಿಚಾರದಲ್ಲಿ ದೇಶದ ಯಾವುದೇ ನಗರವೂ ಅದಕ್ಕೆ ಸರಿಸಮನಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಆಂಧ್ರ ಐಟಿ ಸಚಿವರ ಹೇಳಿಕೆಗೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಲೋಕೇಶ್ ಆಗಲಿ ಅಥವಾ ಇತರರು ಆಗಲಿ ಮಾಡುವ ಯಾವುದೇ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಬೆಂಗಳೂರಿನ ಶಕ್ತಿ ಅಪ್ರತಿಮವಾದುದು. “ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಮತ್ತು 2 ಲಕ್ಷ ವಿದೇಶಿಗರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಒಟ್ಟು ತೆರಿಗೆ ಆದಾಯದ ಸುಮಾರು 40% ರಷ್ಟು ಕೊಡುಗೆ ಬೆಂಗಳೂರಿನಿಂದಲೇ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ,” ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.
“ಬೇರೆಯವರು ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಅವರು ಏನೇ ಮಾಡಿಕೊಂಡರೂ, ಅವರಿಗೆ ಕೇಂದ್ರ ಸರ್ಕಾರವೇ ಸಹಾಯ ಮಾಡಿದರೂ, ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ,” ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ವಿದೇಶಿ ಕಂಪನಿಗಳಿಂದ ಸ್ವಂತ ಕ್ಯಾಂಪಸ್‌ಗಳ ಖರೀದಿಗೆ ಒಲವು
ಬೆಂಗಳೂರಿನ ಬಲವನ್ನು ವಿವರಿಸಿದ ಅವರು, ಎಷ್ಟು ವಿದೇಶಿ ನಾಯಕರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕಿದೆ. ತಾವು ಮತ್ತು ಐಟಿ ಸಚಿವರು, ಬೃಹತ್ ಕೈಗಾರಿಕೆ ಸಚಿವರು ಕೂತು ಚರ್ಚೆ ನಡೆಸುತ್ತಿದ್ದೇವೆ. ಅಮೆರಿಕದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ, ಇಷ್ಟು ದಿನ ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದೇಶಿ ಕಂಪನಿಗಳು ಈಗ ಸ್ವಂತ ಜಾಗ ಖರೀದಿಸಿ, ತಮ್ಮದೇ ಆದ ಸ್ವಂತ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಮುಂದಾಗುತ್ತಿವೆ. ಇದೇ ಬೆಂಗಳೂರಿನ ನಿಜವಾದ ಶಕ್ತಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರ ಟ್ವೀಟ್ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಆಕ್ರೋಶ ವ್ಯಕ್ತಪಡಿಸಿದರು. “ಅವರು ಟ್ವೀಟ್ ಮಾಡುವ ಮೂಲಕ, ತಮಗೆ ನೆರವು ನೀಡಿದ ದೇಶ ಮತ್ತು ರಾಜ್ಯಕ್ಕೆ ಧಕ್ಕೆ ತರುತ್ತಿದ್ದಾರೆ,” ಎಂದು ಕಿಡಿಕಾರಿದರು.
“ಅವರ ಟೀಕೆಗಳು ಅವರಿಗೆ ತಾವೇ ಹಾಗೂ ಈ ನಗರಕ್ಕೆ ದ್ರೋಹ ಬಗೆದಂತೆ,” ಎಂದು ತರಾಟೆಗೆ ತೆಗೆದುಕೊಂಡರು. “ಕಳೆದ 25 ವರ್ಷಗಳಿಂದ ಅವರು ಎಲ್ಲಿದ್ದರು? ಅವರ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿದ್ದು ಇದೇ ಬೆಂಗಳೂರು. ಬೆಂಗಳೂರು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ, ಉದ್ಯಮಿಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದೆ. ಟೀಕಿಸುವವರು ಸರ್ಕಾರಗಳು ತಮಗೆ ಎಷ್ಟು ಜಾಗ ಕೊಟ್ಟಿದೆ, ಎಷ್ಟು ನೆರವು ನೀಡಿದೆ ಎಂಬುದನ್ನು ಸ್ಮರಿಸಬೇಕು,” ಎಂದು ಡಿಸಿಎಂ ಹರಿಹಾಯ್ದರು.