ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಬಾ ರಾಮದೇವ್‌ಗೆ ದೆಹಲಿ ಹೈಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ. ಬಾಬಾ ರಾಮದೇವ್ ಅವರ ಕಂಪನಿ ಪತಂಜಲಿ ಆಯುರ್ವೇದವು ಡಾಬರ್ ಚ್ಯವನ್‌ಪ್ರಾಶ್ ವಿರುದ್ಧ ಯಾವುದೇ ದಾರಿತಪ್ಪಿಸುವ ಅಥವಾ ನಕಾರಾತ್ಮಕ ಜಾಹೀರಾತು ಪ್ರಸಾರ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಮಿನಿ ಪುಷ್ಕರ್ಣ ನೇತೃತ್ವದ ಪೀಠ ಈ ಮಧ್ಯಂತರ ಆದೇಶ ನೀಡಿದ್ದು ಪ್ರಕರಣದ ಮುಂದಿನ ವಿಚಾರಣೆ ಜುಲೈ 14ಕ್ಕೆ ಮುಂದೂಡಿದರು.
ಡಾಬರ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ಡಾಬರ್ ಇಂಡಿಯಾ ಪರವಾಗಿ ಹಾಜರಾದ ವಕೀಲ ಸಂದೀಪ್ ಸೇಥಿ, ಬಾಬಾ ರಾಮದೇವ್ ಅವರ ಕಂಪನಿ ಪತಂಜಲಿ ಆಯುರ್ವೇದವು ತನ್ನ ಜಾಹೀರಾತುಗಳ ಮೂಲಕ ಚ್ಯವನ್‌ಪ್ರಾಶ್ ಗೆ ಮಾನಹಾನಿ ಮಾಡುತ್ತಿದೆ ಎಂದು ಆರೋಪಿಸಿದರು. ಪತಂಜಲಿ ಆಯುರ್ವೇದವು ತನ್ನ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಗೊಂದಲಗೊಳಿಸುತ್ತಿದೆ. ಪತಂಜಲಿ ನಿಜವಾದ ಆಯುರ್ವೇದ ಚ್ಯವನ್‌ಪ್ರಾಶ್ ತಯಾರಿಸುವ ಏಕೈಕ ಸಂಸ್ಥೆ ಎಂದು ದಾರಿತಪ್ಪಿಸುವ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಲು ಪ್ರಯತ್ನಿಸಿದೆ ಎಂದು ಸೇಥಿ ಹೇಳಿದರು. ಡಿಸೆಂಬರ್ 2024ರಲ್ಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದರೂ, ಪತಂಜಲಿ ಒಂದು ವಾರದಲ್ಲಿ 6182 ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದೆ ಎಂದು ಅವರು ಹೇಳಿದರು.
ಪತಂಜಲಿ ಆಯುರ್ವೇದವು ತನ್ನ ಉತ್ಪನ್ನವನ್ನು ಸಾಮಾನ್ಯ ಎಂದು ಕರೆಯುವ ಮೂಲಕ ಡಾಬರ್‌ನ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂದು ಡಾಬರ್‌ನ ಅರ್ಜಿಯಲ್ಲಿ ಹೇಳಿದೆ. ಪತಂಜಲಿಯ ಜಾಹೀರಾತುಗಳು ತನ್ನ ಚ್ಯವನ್‌ಪ್ರಾಶ್ ಅನ್ನು 51ಕ್ಕೂ ಹೆಚ್ಚು ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಎಂದು ಹೇಳುತ್ತವೆ. ಆದರೆ ವಾಸ್ತವದಲ್ಲಿ ಅದು ಕೇವಲ 47 ಗಿಡಮೂಲಿಕೆಗಳನ್ನು ಮಾತ್ರ ಒಳಗೊಂಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪತಂಜಲಿಯ ಉತ್ಪನ್ನದಲ್ಲಿ ಮಕ್ಕಳಿಗೆ ಹಾನಿಕಾರಕ ಪಾದರಸ ಕಂಡುಬಂದಿದೆ ಎಂದು ಡಾಬರ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.