ರನ್ಯಾ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ತಡೆನೀಡಿ : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ರನ್ಯಾ ರಾವ್ ಮತ್ತು ಅವರ ತಂದೆ, ಕರ್ನಾಟಕ ಸರ್ಕಾರದ ಡಿಜಿಪಿ ದರ್ಜೆಯ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಮಾಧ್ಯಮಗಳು ಸುಳ್ಳು ಮತ್ತು ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುವುದನ್ನು ಅಥವಾ ಪ್ರಕಟಿಸುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿ ತನಿಖೆ ಇತ್ಯಾದಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಮಧ್ಯೆ ಹೈಕೋರ್ಟ್ ಈ ಆದೇಶ ನೀಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧನ ನಂತರ ಹಲವು ಬೆಳವಣಿಗೆಗಳು ನಡೆದಿದ್ದು, ಅಧಿಕಾರಿಗಳು ರನ್ಯಾ ರಾವ್ ಅವರಿಂದ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದರ ನಂತರ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ನಡೆದ ಶೋಧದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಮಾರ್ಚ್ 12 ರಂದು, ರನ್ಯಾ ರಾವ್ ಅವರ ತಾಯಿ ಎಚ್ ಪಿ ರೋಹಿಣಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು, ಈ ವೇಳೆ ಜೂನ್ 2 ರವರೆಗೆ ಮಾಧ್ಯಮಗಳು ನಟಿಯ ವಿರುದ್ಧ ಯಾವುದೇ ಹೇಳಿಕೆ ಪ್ರಕಟಿಸುವುದು ಅಥವಾ ಪ್ರಸಾರ ಮಾಡದಂತೆ ನಿರ್ಬಂಧಿಸಿ ಏಕಪಕ್ಷೀಯ ಆದೇಶವನ್ನು ಹೊರಡಿಸಿತು. ನಂತರ ಅವರ ತಂದೆ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಹೈಕೋರ್ಟ್ ಇದೇ ರೀತಿಯ ನಿರ್ದೇಶನ ನೀಡಿದೆ.

ನ್ಯಾಯಾಲಯ ಆದೇಶ ಹೊರತಾಗಿಯೂ ಕೆಲವು ಮಾಧ್ಯಮಗಳು ಸಂವೇದನಾಶೀಲ ಮತ್ತು ಹಾನಿಕಾರಕ ವಿಷಯವನ್ನು ಪ್ರಕಟಿಸುವುದನ್ನು ಮುಂದುವರೆಸಿವೆ ಎಂದು ರನ್ಯಾ ತಾಯಿ ನ್ಯಾಯಾಲಯ ಮೊರೆ ಹೋಗಿದ್ದರು. ಹೈಕೋರ್ಟ್‌ನಲ್ಲಿ ಅವರ ಅರ್ಜಿಯಲ್ಲಿ ತನಿಖೆಯ ಬಗ್ಗೆ ವಸ್ತುನಿಷ್ಠವಾಗಿ ವರದಿ ಮಾಡುವ ಬದಲು, ಮಾಧ್ಯಮಗಳು ಆರೋಪಿಯ ಚಾರಿತ್ರ್ಯಹರಣದಲ್ಲಿ ತೊಡಗಿವೆ ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಸುಳ್ಳು ಮತ್ತು ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುವುದನ್ನು ಅಥವಾ ಪ್ರಕಟಿಸುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!