ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪುಣೆಯ ಯೆರವಾಡದ ಶಾಸ್ತ್ರಿ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಐಷಾರಾಮಿ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಾನೆ. ಆತನ ಸ್ನೇಹಿತ ಟ್ರಾಫಿಕ್ ಸಿಗ್ನಲ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ. ಸಿಗ್ನಲ್ ಬದಲಾದ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಅವನ ಜೊತೆಗಿದ್ದ ಸ್ನೇಹಿತ ನಗುತ್ತಾ ಇಡೀ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.
ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಭಾಗ್ಯೇಶ್ ಓಸ್ವಾಲ್ ಹಾಗೂ ಮೂತ್ರ ವಿಸರ್ಜನೆ ಮಾಡಿದ ಯುವಕನ ಹೆಸರು ಗೌರವ್ ಅಹುಜಾ ಎಂದು ತಿಳಿದು ಬಂದಿದೆ. ಓಸ್ವಾಲ್‌ನನ್ನು ಆತನ ಮನೆಯಿಂದ ಬಂಧಿಸಲಾಗಿದ್ದು, ಈ ಘಟನೆ ನಡೆದಾಗ ಇಬ್ಬರೂ ಅಮಲಿನಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅತಿ ವೇಗವಾಗಿ ವಾಹನ ಚಲಾಯಿಸಿದ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ, ಸಾರ್ವಜನಿಕ ರಸ್ತೆಗಳಲ್ಲಿ ಅಪಾಯ ಉಂಟುಮಾಡಿದ ಮತ್ತು ಇತರ ಅಪರಾಧಗಳಿಗಾಗಿ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.