ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನ ಖ್ಯಾತ ನಟ ಹಾಗೂ ರಾಜಕೀಯ ರಂಗಕ್ಕೆ ಕಾಲಿಟ್ಟಿರುವ ‘ದಳಪತಿ’ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ತಲ್ಲಣ ಶುರುವಾಗಿದೆ. ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಘೋಷಿಸಿ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಪತ್ನಿ ಸಂಗೀತಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು ವಿಜಯ್ ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ ನ್ಯಾಯಾಲಯದ ಮೆಟ್ಟಿಲೇರಿರುವ ಸಂಗೀತಾ, ಅರ್ಜಿಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 2021ರಲ್ಲಿ ವಿಜಯ್ ಅವರಿಗೆ ಬೇರೊಬ್ಬ ನಟಿಯ ಜೊತೆ ವಿವಾಹೇತರ ಸಂಬಂಧ ಇರುವುದು ತಮ್ಮ ಗಮನಕ್ಕೆ ಬಂದಿತು ಎಂದು ಅವರು ಉಲ್ಲೇಖಿಸಿದ್ದಾರೆ. ಈ ಕಾರಣದಿಂದಾಗಿ ಒಟ್ಟಿಗೆ ಬಾಳಲು ಅಸಾಧ್ಯವಾಗಿದ್ದು, ವಿಚ್ಛೇದನ ನೀಡುವಂತೆ ಮನವಿ ಮಾಡಿದ್ದಾರೆ.
ವಿಚ್ಛೇದನಕ್ಕೆ ಪ್ರತಿಯಾಗಿ ಸಂಗೀತಾ ಅವರು ವಿಜಯ್ ಮುಂದೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಈಗಿನ ಸಾಮಾಜಿಕ ಸ್ಥಾನಮಾನಕ್ಕೆ ತಕ್ಕಂತೆ ಜೀವನ ಸಾಗಿಸಲು ಭಾರಿ ಮೊತ್ತದ ಜೀವನಾಂಶವನ್ನು ನೀಡಬೇಕು.
ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಈಗ ವಾಸವಿರುವ ಮನೆಯಲ್ಲೇ ಇರಲು ಅವಕಾಶ ನೀಡಬೇಕು.
ಮಗ ಮತ್ತು ಮಗಳ ಶಿಕ್ಷಣ ಹಾಗೂ ಮದುವೆಯ ಖರ್ಚುಗಳಿಗಾಗಿ ಪ್ರತ್ಯೇಕವಾಗಿ ಹಣದ ‘ಭವಿಷ್ಯ ನಿಧಿ’ಯನ್ನು ಮಾಡಿಕೊಡಬೇಕು.
ರಾಜಕೀಯವಾಗಿ ಉತ್ತುಂಗಕ್ಕೇರಲು ಹವಣಿಸುತ್ತಿರುವ ವಿಜಯ್ ಅವರಿಗೆ, ಸಂಸಾರದಲ್ಲಿ ಎದುರಾಗಿರುವ ಈ ಬಿಕ್ಕಟ್ಟು ರಾಜಕೀಯ ಎದುರಾಳಿಗಳ ಟೀಕೆಗೂ ಆಹಾರವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ದಳಪತಿಯ ವೈವಾಹಿಕ ಜೀವನದ ಈ ಬೆಳವಣಿಗೆ ಈಗ ಕಾಲಿವುಡ್ ಹಾಗೂ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.



