ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನಲ್ಲಿ ಬಿರುಗಾಳಿ ಮಳೆ ಮುಂದುವರಿದಿದ್ದು ತಗ್ಗು ಪ್ರದೇಶದ ಕೃಷಿ ಭೂಮಿ ಜಲಾವೃತಗೊಂಡಿದೆ.
ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ.
ಅತಿ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಹಲವಾರು ಕಡೆಗಳಲ್ಲಿ ಗಿಡ ಮರಗಳು ಮುರಿದು ಬಿದ್ದಿದ್ದು ಸಗಡಗೇರಿಯಲ್ಲಿ ಎರಡು ಮನೆಗಳ ಮೇಲೆ ಮರ ಮುರಿದು ಬಿದ್ದು ಹಾನಿ ಸಂಭವಿಸಿದ್ದು, ಕೇಣಿಯಲ್ಲಿ ಒಂದು ಮನೆಯ ಮೇಲೆ ಮರ ಮುರಿದು ಬಿದ್ದಿದೆ.
ತಾಲೂಕಿನ ಹನುಮಟ್ಟ ಚಾಮುಂಡೇಶ್ವರಿ ದೇವಾಲಯದ ಬಳಿ ಬೃಹತ್ ಆಲದ ಮರ ಉರುಳಿ ಬಿದ್ದಿದ್ದು ಮರ ಬಿದ್ದು ಹಲವು ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ, ಮರ ಮುರಿದು ಬಿದ್ದ ಪರಿಣಾಮ ದೇವಾಲಯದ ಗೋಡೆಗೆ ಮತ್ತು ದ್ವಿಚಕ್ರ ವಾಹನಗಳಿಗೆ ಹಾನಿ ಉಂಟಾಗಿದೆ.
ಗಂಗಾವಳಿ ನದಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಭಾರೀ ಗಾತ್ರದ ಮರಗಳು ಗಂಗಾವಳಿ ನದಿಯಲ್ಲಿ ತೇಲಿ ಬರುತ್ತಿರುವುದು ಕಂಡು ಬಂದಿದೆ.
ಮುಂದಿನ ಎರಡು ದಿನಗಳ ಕಾಲ ಕಾಲ ಭಾರೀ ಪ್ರಮಾಣದಲ್ಲಿ ಗಾಳಿ ಮತ್ತು ಮಳೆ ಸಂಭವಿಸುವ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ.