ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ ಮುಚ್ಚಿಹಾಕಲು ತಂತ್ರ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ಡಿ.ಜೆ.ಹಳ್ಳಿ- ಕೆ.ಜಿ.ಹಳ್ಳಿ ಘಟನೆಯಲ್ಲಿ ಶಾಸಕನ ಮನೆಗೆ ಬೆಂಕಿ ಹಾಕಿದ ಆರೋಪಿಗಳನ್ನು ಬಿಡುಗಡೆ ಮಾಡಲು ಗೃಹ ಸಚಿವರ ಮೇಲೆ ಒತ್ತಡ ತರಲಾಗಿದೆ. ಗೃಹ ಸಚಿವರು ತಪ್ಪಿತಸ್ಥರ ಬಿಡುಗಡೆಗೆ ಸೂಚಿಸಿದರೆ ಪಾಪ ಮಾಡಿದಂತಾಗುತ್ತದೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ , ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಅವರು ಬರೆದ ಪತ್ರವನ್ನು ಸರಕಾರಕ್ಕೆ ಕಳಿಸಿದ್ದು, ಪತ್ರ ವಾಪಸ್ ಪಡೆಯಬೇಕು ಎಂದರು.

ಇದೇ ವೇಳೆ ಡಾ.ಪರಮೇಶ್ವರರಿಗೆ ಕಿವಿಮಾತು ಹೇಳಿದ ನಾರಾಯಣಸ್ವಾಮಿ, ಶಾಸಕರ ಮನೆಗೆ ಬೆಂಕಿ ಹಾಕಿದ ಕಳಂಕವನ್ನು ಗೃಹ ಸಚಿವ ಪರಮೇಶ್ವರರಿಗೆ ಹಚ್ಚಲು ಕಾಂಗ್ರೆಸ್ ಪಿತೂರಿ ಮಾಡಿದೆ ಎಂದು ಟೀಕಿಸಿದರು.

ಹಿಂದಿನ ಬಿಜೆಪಿ ಸರಕಾರವು ಅರವಿಂದ ಲಿಂಬಾವಳಿ, ಗುತ್ತೇದಾರ್, ಶಂಕರಪ್ಪ, ನಾನು ಮತ್ತು ಕೆಲವರಿದ್ದ ಸತ್ಯಶೋಧನಾ ಸಮಿತಿಯನ್ನು ಕಳಿಸಿತ್ತು. ನಾವು ಘಟನೆ ಕುರಿತು ವರದಿ ಕೊಟ್ಟಿದ್ದೆವು. ಕಾಂಗ್ರೆಸ್ಸಿನ ಸತ್ಯಶೋಧನಾ ಸಮಿತಿಯ ಅಧ್ಯಕ್ಷತೆಯನ್ನು ಈಗಿನ ಗೃಹ ಸಚಿವ ಪರಮೇಶ್ವರರು ವಹಿಸಿದ್ದರು. ಸ್ಪಷ್ಟ ಪ್ರಾಥಮಿಕ ಮಾಹಿತಿ ಅವರಿಗೂ ಗೊತ್ತಿದೆ. ಆದರೆ, ಮರುಪರಿಶೀಲನೆಗೆ ಸೂಚಿಸುವ ಮೂಲಕ ದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ಈ ಕೇಸ್ ಹಿಂಪಡೆದರೆ ಕೇಂದ್ರ ಸರಕಾರವು ಸ್ವಯಂಪ್ರೇರಣೆಯಿಂದ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಘಟನೆಯನ್ನು ಮರು ಪರಿಶೀಲಿಸಿ ಆರೋಪಿಗಳನ್ನು ಬಿಟ್ಟುಬಿಡಲು ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಅಲ್ಲಿನ ಘಟನೆಯಲ್ಲಿ ಕೇವಲ ಅಮಾಯಕರು ಇದ್ದರು ಎಂಬ ವಿಚಾರ ಪತ್ರದಲ್ಲಿದೆ ಎಂದು ತಿಳಿದಿರುವುದಾಗಿ ವಿವರಿಸಿದರು.

ಇದು ಓಲೈಕೆ, ಮತಬ್ಯಾಂಕಿನ ರಾಜಕಾರಣ ಎಂದು ಟೀಕಿಸಿದರು. ಇವತ್ತು ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ತಾವು ಕೇಸುಗಳನ್ನು ಹಿಂಪಡೆಯುವುದಾಗಿ ಸಿಎಂ ತಿಳಿಸಿದ್ದಾರೆ. ಹಿಂದೆ ಪಿಎಫ್‍ಐ, ಎಸ್‍ಡಿಪಿಐ ಮೇಲಿದ್ದ 600-700 ಕೇಸುಗಳನ್ನು ಇದೇ ಮುಖ್ಯಮಂತ್ರಿಗಳು ವಾಪಸ್ ಪಡೆದಿದ್ದರು. ಈಗ ಪಿಎಫ್‍ಐ ಬ್ಯಾನ್ ಆಗಿದೆ. ಕೇಸು ಹಿಂಪಡೆದರೆ ಅವರಿಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಎಚ್ಚರಿಸಿದರು. ಕೇಸು ಹಿಂಪಡೆದರೆ ಕಾನೂನು ಹೋರಾಟ ಮಾಡುತ್ತೇವೆ; ಇದರಿಂದ ಗೃಹ ಸಚಿವರ ಸ್ಥಾನಕ್ಕೂ ತೊಂದರೆ ಆದೀತು ಎಂದು ಎಚ್ಚರಿಕೆ ನೀಡಿದರು.

ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಘಟನೆ ಕೇವಲ ಕರ್ನಾಟಕಕ್ಕೆ ಮಾತ್ರ ಗೊತ್ತಿರುವುದಲ್ಲ. ಇಡೀ ರಾಷ್ಟ್ರ ಆ ದಿನಗಳಲ್ಲಿ ಅದನ್ನು ಗಮನಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಬಗ್ಗೆ ಪರಿಚಯ ಆಗಿದೆ ಎಂದರು.

ಈ ಘಟನೆಯಲ್ಲಿ ಕಾಂಗ್ರೆಸ್ ನಾಯಕರೇ ಭಾಗವಹಿಸಿದ್ದರು. ಬಳಿಕ ಅವರ ಮೇಲೆ ಎಫ್‍ಐಆರ್ ಆಗಿತ್ತು. ಆ ಘಟನೆ ಕೇವಲ ಶಾಸಕರ ಮನೆಗೆ ಸೀಮಿತ ಆಗಿರಲಿಲ್ಲ. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿತ್ತು. ನಂತರ ಪೊಲೀಸ್ ವ್ಯಾನ್‍ಗಳು, 25- 30 ವಾಹನಗಳನ್ನು ಸುಟ್ಟು ಭಸ್ಮ ಮಾಡಲಾಗಿತ್ತು. ಅಂದಿನ ನಮ್ಮ ಸರಕಾರದ ಕ್ರಮದಿಂದ ಎಫ್‍ಐಆರ್ ಆಗಿ, ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣ ದಾಖಲಾಗಿತ್ತು. ಅನೇಕರು ಇದೀಗ ಜಾಮೀನಿನಡಿ ಹೊರಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.

ಸುಮಾರು 200 ಜನರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗವಹಿಸದೆ ಇರುವ ಅನೇಕರನ್ನು ಅವತ್ತೇ ಬಿಡುಗಡೆ ಮಾಡಲಾಗಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿತ್ತು ಎಂದ ಅವರು, ಈಗ ಗೃಹ ಸಚಿವ ಡಾ. ಪರಮೇಶ್ವರರ ಮೇಲೆ ಒತ್ತಡ ಇರುವುದು ಸ್ಪಷ್ಟ. ಈ ಒತ್ತಡಕ್ಕೆ ಅವರು ಮಣಿಯಬಾರದಿತ್ತು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಇದು ಹಾಸ್ಯಾಸ್ಪದ ಎಂದರು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಪತ್ರ ಬರೆದವರು ಅಮಾಯಕರೇ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!