ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್ ಪಡೆಯುತ್ತಿರುವ ಕ್ಯಾಬ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ.
ಟ್ಯಾಕ್ಸಿ ಸೇವೆಗೆ ಗ್ರಾಹಕರಿಂದ ಬುಕ್ ಮಾಡುವಾಗಲೇ ಟಿಪ್ಸ್ ರೂಪದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದೆ. ಈ ಪ್ರಾಧಿಕಾರವು ಪ್ರಮುಖ ಕ್ಯಾಬ್ ಸರ್ವೀಸ್ Uber ಗೆ ನೋಟಿಸ್ ಜಾರಿ ಮಾಡಿದೆ ಎಂದು ಜೋಶಿ ತಿಳಿಸಿದ್ದಾರೆ.
ಟಿಪ್ಸ್ ಎನ್ನುವುದು ಗ್ರಾಹಕರು ಉತ್ತಮ ಸೇವೆಗೆ ಮೆಚ್ಚಿ ಕೊಡುವಂಥದ್ದು. ಇದನ್ನು ಯಾರೂ ಒತ್ತಾಯದಿಂದ ಪಡೆಯಬಾರದು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಎಕ್ಸ್ ಪೋಸ್ಟ್ನಲ್ಲಿ ಸೂಚಿಸಿದ್ದಾರೆ.
ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್ ಬಗ್ಗೆ CCPAಗೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
‘ಬೇಗ ಪಿಕಪ್ ಬೇಕೆಂದರೆ ಟಿಪ್ ಸೇರಿಸಿ. ನೀವು ಟಿಪ್ ಸೇರಿಸಿದರೆ ಈ ರೈಡ್ಗೆ ಡ್ರೈವರ್ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಟಿಪ್ನ ಪೂರ್ಣ ಹಣವು ಡ್ರೈವರ್ಗೆ ಸಂದಾಯವಾಗುತ್ತದೆ. ನೀವು ಈಗ ಟಿಪ್ ಸೇರಿಸಿದರೆ ಅದನ್ನು ನಂತರ ಬದಲಿಸಲು ಆಗುವುದಿಲ್ಲ’ ಎಂದು ಆ ಟಿಪ್ ಮೆಸೇಜ್ನಲ್ಲಿ ಬರೆಯಲಾಗಿದೆ.