ಶಕ್ತಿ ಯೋಜನೆ ವಿರೋಧಿಸಿ ಅವಳಿ ನಗರದಲ್ಲಿ ನಾಳೆ ಆಟೋ ಚಾಲಕರಿಂದ ಬಂದ್

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ವಿರೋಧಿಸಿ, ಆಟೋ ಚಾಲಕರು ಮತ್ತು ವಾಣಿಜ್ಯ ವಾಹನ ಚಾಲಕರ  ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 31ರಂದು ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘ ಮತ್ತು ಹುಬ್ಬಳ್ಳಿ ಧಾರವಾಡ ಆಟೊ ಚಾಲಕರ ಒಕ್ಕೂಟದಿಂದ ಬಂದ್‌ಗೆ ಕರೆ ಕೊಡಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅವಳಿ ನಗರದಲ್ಲಿ ಆಟೊ ಸೇವೆ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮನವಿ ಮಾಡಿದ್ದಾರೆ.

ಬೇಂದ್ರೆ ಸಾರಿಗೆ ಸಂಸ್ಥೆಯ ಹರೀಶ ರಾಜಕುಮಾರ ಟ್ರಾವೆಲ್ಸ್‌ ಸೇರಿದಂತೆ 15 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಅಲ್ಲದೆ ಕನ್ನಡಪರ ಸಂಘಟನೆಗಳು, ಟಂಟಂ, ಟ್ಯಾಕ್ಸಿ ವಾಹನಗಳ ಮಾಲೀಕರು ಮತ್ತು ಚಾಲಕರ ಬೆಂಬಲವನ್ನೂ ಕೋರಲಾಗಿದೆ.

ಶಕ್ತಿ ಯೋಜನೆ ಜಾರಿಯಾದ ನಂತರ ಬಾಡಿಗೆ ಇಲ್ಲದೆ ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನಗರ ಪ್ರದೇಶದಲ್ಲಿ 20 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಆಟೊಗಳು ಸಂಚರಿಸಬೇಕು ಎಂಬ ನಿಯಮ ಇದೆ. ಈ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆಯನ್ನು ರದ್ದುಪಡಿಸಬೇಕು ಎಂದರು.

ಆಟೋ ಚಾಲಕರು ಅಸಂಘಟಿತ ವಲಯದಲ್ಲಿ ಬರುತ್ತಾರೆ. ಅವರಿಗೆ ಕಾರ್ಮಿಕ ಕಾರ್ಡ್‌ಗಳನ್ನು ನೀಡಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಆಟೋ ಚಾಲಕರು ಅಪಘಾತಗಳಲ್ಲಿ ಮೃತಪಟ್ಟರೆ ಅವರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಬಹುತೇಕ ಆಟೋ ಚಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಾರೆ. ಹೀಗಾಗಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!