March 29, 2026
Sunday, March 29, 2026
spot_img

ಕಾಂಗ್ರೆಸ್ ಹಗರಣಗಳ ಸರಮಾಲೆ, ಅಭಿವೃದ್ಧಿ ಶೂನ್ಯ: ರಾಜ್ಯ ಸರ್ಕಾರದ ವಿರುದ್ಧ ಕಾರಜೋಳ ವಾಗ್ದಾಳಿ

ಹೊಸದಿಗಂತ ಚಿತ್ರದುರ್ಗ:

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಪ್ರತಿಯೊಂದು ಮನೆಗೆ ತಲುಪಿಸುವುದು ಕಾರ್ಯಕರ್ತರ ಆದ್ಯ ಕರ್ತವ್ಯ. ಈ ಜವಾಬ್ದಾರಿಯನ್ನು ಅಭಿಮಾನದಿಂದ ನಿರ್ವಹಿಸದಿದ್ದರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಮಾರ್ಮಿಕವಾಗಿ ನುಡಿದರು.

ನಗರದ ಕಮ್ಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ, ಬಿಎಲ್‌ಓ-2 (BLO-2) ಕಾರ್ಯಾಗಾರ ಹಾಗೂ ‘ವಿಬಿ ಜಿ ರಾಮ್ ಜಿ’ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಯುವ ಮತದಾರರನ್ನು ನೋಂದಾಯಿಸುವುದು ಮತ್ತು ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಕೆಲಸವನ್ನು ಬಿಎಲ್‌ಓಗಳು ನಿಷ್ಠೆಯಿಂದ ಮಾಡಬೇಕು.

ಮುದ್ರಾ ಯೋಜನೆಯಡಿ ಜಿಲ್ಲೆಗೆ ಸಂದಿರುವ 3,900 ಕೋಟಿ ರೂ., ಫಸಲ್ ಬಿಮಾ ಮತ್ತು ಕಿಸಾನ್ ಸಮ್ಮಾನ್ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಿದೆ. ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಬೇಕು.

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗರಣಗಳ ಕೂಪವಾಗಿದೆ ಎಂದು ಟೀಕಿಸಿದ ಕಾರಜೋಳ, “ಮುಡಾ ಹಗರಣದ ಬೆನ್ನಲ್ಲೇ ಆರು ಸಾವಿರ ಕೋಟಿ ರೂ. ಅಬಕಾರಿ ಹಗರಣ ನಡೆದಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್‌ನಲ್ಲಿನ ಆಂತರಿಕ ಗುಂಪುಗಾರಿಕೆಯಿಂದಾಗಿ ಈ ಸರ್ಕಾರ ಐದು ವರ್ಷ ಪೂರೈಸುವುದು ಅನುಮಾನ,” ಎಂದು ಭವಿಷ್ಯ ನುಡಿದರು.

ಮಾಜಿ ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, “ಅಕ್ರಮ ನುಸುಳುಕೋರರ ಮತಗಳಿಂದ ಗೆಲ್ಲುತ್ತಿದ್ದ ಕಾಂಗ್ರೆಸ್‌ಗೆ ಈಗ ಮತಪಟ್ಟಿ ಪರಿಷ್ಕರಣೆ ಎಂಬುದು ಬಿಸಿತುಪ್ಪವಾಗಿದೆ. ಅದಕ್ಕಾಗಿಯೇ ಅವರು ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಿಖರವಾದ ಮತಪಟ್ಟಿ ಅಗತ್ಯ,” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ವೈ.ಎ. ನಾರಾಯಣಸ್ವಾಮಿ ಹಾಗೂ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಡಾ. ಸಿದ್ದಾರ್ಥ ಗುಂಡಾರ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !