ಹೊಸದಿಗಂತ ವರದಿ, ಮಂಡ್ಯ :
ಪೂರ್ವ ಮುಂಗಾರು ಚುರುಕಾಗಿರುವ ಕಾರಣ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಎರಡು ಅಡಿಗೂ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದೆ.
ಕಳೆದ ಮೇ 14ರಲ್ಲಿ ಕೇವಲ 150 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಇಂದು ಜಲಾಶಯಕ್ಕೆ 3405 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇದರಿಂದಾಗಿ ಕೃಷ್ಣರಾಜಸಾಗರ ಜಲಾಶಯದಲ್ಲಿ 80 ಅಡಿ ಸಂಗ್ರಹವಾಗಿದ್ದ ನೀರಿನ ಮಟ್ಟ ಇದೀಗ 82.80 ಅಡಿಗೆ ಏರಿಕೆಯಾಗಿದೆ.
ಕಳೆದ ವರ್ಷ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ಕೃಷ್ಣರಾಜಸಾಗರ ಸಾಗರ ಜಲಾಶಯ ಭರ್ತಿಯಾಗಲಿಲ್ಲ. ಈ ಮಧ್ಯೆ ಸಂಗ್ರಹವಾಗಿದ್ದ ಕಡಿಮೆ ಪ್ರಮಾಣ ನೀರನ್ನು ತಮಿಳುನಾಡಿಗೇ ಹರಿಸುವಂತಾಗಿತ್ತು. ಜೊತೆಗೆ ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ಕಟ್ಟು ನೀರು ಪದ್ಧತಿ ಅನುಸಾರ ಬೆಳೆಗಳಿಗೆ ನೀರು ಕೊಟ್ಟು ಇರುವ ಬೆಳೆಯನ್ನು ರಕ್ಷಣೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಬರದ ಭೀಕರತೆ ತುಂಬಾ ಜೋರಾಗಿಯೇ ಇತ್ತು.
ಸಾಮಾನ್ಯವಾಗಿ ಮೇ ಕೊನೇ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮಳೆ ಬೀಳುವ ಸಾಧ್ಯತೆಗಳಿದ್ದು, ಈ ಬಾರಿ ಮೇ ಮಧ್ಯದಲ್ಲೇ ಪೂರ್ವ ಮುಂಗಾರು ಬೀಳುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.