ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳಂ ಭಾಷಾ ಮಸೂದೆ–2025ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಕನ್ನಡದ ಭಾಷಾ-ಸಾಂಸ್ಕೃತಿಕ ಬದುಕು ಗಟ್ಟಿಯಾಗಿ ಬೆಳೆದುನಿಂತಿರುವ ಸಂದರ್ಭದಲ್ಲಿ ಇಂತಹ ಮಸೂದೆ ಜಾರಿಗೆ ತರುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇರಳದ ಗಡಿ ಜಿಲ್ಲೆಗಳಲ್ಲಿರುವ ಜನರ ಮನಸ್ಸು ಮತ್ತು ದಿನನಿತ್ಯದ ಬದುಕು ಕನ್ನಡ ಭಾಷೆಯೊಂದಿಗೇ ಬೆರೆತಿದೆ. ಕೇರಳದಲ್ಲಿ 200ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿದ್ದು, ಕಾಸರಗೋಡಿನಂತಹ ಪ್ರದೇಶಗಳಲ್ಲಿ ಕನ್ನಡ ಬಳಕೆ ವ್ಯಾಪಕವಾಗಿದೆ. ಅಲ್ಲಿ ಕನ್ನಡ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅನುಭವದಿಂದಲೇ, ಆ ಭಾಗ ಸಂಪೂರ್ಣ ಕನ್ನಡಮಯವಾಗಿರುವುದು ಗೊತ್ತಾಗಿದೆ ಎಂದು ತಂಗಡಗಿ ಹೇಳಿದರು.
ಇದನ್ನೂ ಓದಿ: FOOD | ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ಪನೀರ್ ಬಿರಿಯಾನಿ!
ಮಲಯಾಳಂ ಭಾಷಾ ಮಸೂದೆ ಅಂಗೀಕಾರದಿಂದ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗಿದ್ದು, ಭಾಷಾ ಸ್ವಾತಂತ್ರ್ಯಕ್ಕೂ ಧಕ್ಕೆ ಉಂಟಾಗಿದೆ ಎಂದು ಅವರು ಆರೋಪಿಸಿದರು. ಈ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂಬುದು ನಮ್ಮ ಆಗ್ರಹ; ಯಾವುದೇ ಸಂದರ್ಭದಲ್ಲೂ ಕನ್ನಡದ ಭಾವನೆಗಳಿಗೆ ಧಕ್ಕೆಯಾಗಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

