ಹೊಸದಿಗಂತ ವರದಿ ಕಲಬುರಗಿ:
ಶಾಲಾ ಆವರಣದ ಬಾವಿಯೊಂದರಲ್ಲಿ ಬಿದ್ದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ ಡಾನ್ ಬಾಸ್ಕೋ ಶಾಲೆಯಲ್ಲಿ ನಡೆದಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ನಿವಾಸಿಯಾಗಿದ್ದ ವಸತಿ ವಿದ್ಯಾರ್ಥಿ ಗುರು (15) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿದ್ದು,ಕಳೆದ ಮೂರು ದಿನಗಳಿಂದ ಶಾಲೆಯಿಂದ ನಾಪತ್ತೆಯಾಗಿದ್ದನು.ಇಂದು ಶಾಲೆಯ ಆವರಣದಲ್ಲಿರುವ ಬಾವಿಯಲ್ಲಿ ಅವನ ಶವ ಪತ್ತೆಯಾಗಿದ್ದು,ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಹಿತಿಯ ಪ್ರಕಾರ, ಎರಡು ದಿನಗಳ ಹಿಂದೆ ವಿದ್ಯಾರ್ಥಿ ಶಾಲೆಯ ಬೈಕ್ ತೆಗೆದುಕೊಂಡು ಹೋಗಿ ಗೋಡೆಗೆ ಡಿಕ್ಕಿ ಹೊಡೆದಿದ್ದನು.ಈ ವೇಳೆ ಬೈಕ್‌ನ ಡೋಮ್ ಹಾನಿಗೊಂಡಿದ್ದು,ಘಟನೆ ಬಗ್ಗೆ ಸಿಬ್ಬಂದಿ ಪ್ರಿನ್ಸಿಪಾಲ್ ಅವರಿಗೆ ದೂರು ನೀಡಿದ್ದರು ಎನ್ನಲಾಗಿದೆ.ನಂತರ ಪ್ರಿನ್ಸಿಪಾಲ್ ವಿದ್ಯಾರ್ಥಿಯನ್ನು ಬೈದು,ಬೈಕ್ ದುರಸ್ತಿ ವೆಚ್ಚವನ್ನು ಕುಟುಂಬಸ್ಥರಿಂದ ಭರಿಸಲು ಹೇಳುವಂತೆ ಸೂಚಿಸಿದ್ದರೆಂಬ ಆರೋಪ ಕೇಳಿಬಂದಿದೆ.
ಈ ಘಟನೆದಿಂದ ಹೆದರಿದ ವಿದ್ಯಾರ್ಥಿ ಗುರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣವು ಸಬ್ ಅರ್ಬನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು,ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವಿದ್ಯಾರ್ಥಿಯ ಸಾವಿನ ನಿಜವಾದ ಕಾರಣ ತನಿಖೆಯ ನಂತರವೇ ಬಹಿರಂಗವಾಗಬೇಕಿದೆ.



