ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನಂದರಾಮಯ್ಯನ ಪಾಳ್ಯದಲ್ಲಿ ರ‍್ಯಾಗಿಂಗ್‌ಗೆ ಹೆದರಿ ಆರ್ಕಿಟೆಕ್ಚರ್ ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಹಾಸನ ಮೂಲದ ಚನ್ನಕೇಶವ ಹಾಗೂ ತುಳಸಿ ದಂಪತಿಯ ಹಿರಿಯ ಮಗ ಅರುಣ್ (22) ಮೃತ ವಿದ್ಯಾರ್ಥಿ. ಜು. 11ರಂದು ತಂದೆ, ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಅರುಣ್ ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತರ ರ‍್ಯಾಗಿಂಗ್ ಬಗ್ಗೆ ಹೇಳಿಕೊಂಡಿದ್ದ. ನನ್ನ ಬೆನ್ನ ಹಿಂದೆ ಕೆಟ್ಟ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ವಿಡಿಯೋದಲ್ಲಿ ಹೇಳಿದ್ದ. ಬಳಿಕ ಆ ವಿಡಿಯೋವನ್ನು ಕಾಲೇಜು ಗ್ರೂಪ್‌ಗೆ ಹಾಕಿ, ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಂದೆ-ತಾಯಿ ಕೂಲಿ ಕೆಲಸ ಮಾಡಿ, ಮಕ್ಕಳನ್ನು ಸಾಕುತ್ತಿದ್ದರು. ಮನೆಯಲ್ಲಿ ಬಡತನವಿದ್ದರೂ ಅರುಣ್ ಕಲಿಕೆಯಲ್ಲಿ ಕಾಲೇಜು ಟಾಪರ್ ಆಗಿದ್ದನು. ಕಲೆಯಲ್ಲೂ ಆಸಕ್ತಿ ಹೊಂದಿದ್ದ ಅರುಣ್, 5 ನಿಮಿಷದಲ್ಲಿ ಭಾವಚಿತ್ರ, ವಿಭಿನ್ನ ಚಿತ್ರಗಳನ್ನು ಬಿಡಿಸುವ ಕಲೆ ಹೊಂದಿದ್ದ. ಗಣ್ಯಾತಿಗಣ್ಯರು ಚಿತ್ರ ಹಾಗೂ ಕಲಾಕೃತಿಗಳ ಚಿತ್ರಗಳನ್ನೂ ಬಿಡಿಸುತ್ತಿದ್ದನು.
ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಲೇಜಿನವರು ಅರುಣ್ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೋಷಕರು ಮನೆಗೆ ಬಂದು ನೋಡಿದಾಗ ಅರುಣ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಈ ಘಟನಾ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.