ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದುರಂತ ಘಟನೆಯಲ್ಲಿ, ಪಿಜಿ ವೊಂದರ ಕೋಣೆಯಲ್ಲಿ ಸಿಂಪಡಿಸಿದ್ದ ತಿಗಣೆ ಔಷಧಿ ವಾಸನೆಯನ್ನು ಉಸಿರಾಡಿ ಬಿಟೆಕ್ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಆಂಧ್ರಪ್ರದೇಶದ ತಿರುಪತಿ ಮೂಲದ ಪವನ್ ಎಂದು ಗುರುತಿಸಲಾಗಿದೆ. ಆತ ಪಿಜಿಯ ಕೊಠಡಿಯಲ್ಲಿ ವಾಸಿಸುತ್ತಿದ್ದ. ವಾರದ ಹಿಂದೆ ಊರಿಗೆ ಹೋಗಿದ್ದ ಸಮಯದಲ್ಲಿ, ಆತನ ಕೋಣೆಯಲ್ಲಿ ತಿಗಣೆ ನಿವಾರಕ ಔಷಧಿ ಸಿಂಪಡಿಸಿ ರೂಮ್ ಅನ್ನು ಬಂದ್ ಮಾಡಲಾಗಿತ್ತು.
ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಊರಿನಿಂದ ಹಿಂದಿರುಗಿದ ಪವನ್, ರಾತ್ರಿ ನೇರವಾಗಿ ರೂಂಗೆ ಪ್ರವೇಶಿಸಿ ಮಲಗಿದ್ದ. ರಾತ್ರಿಯಿಡೀ ವಿಷಕಾರಿ ವಾಸನೆಯನ್ನು ಉಸಿರಾಡಿದ ಕಾರಣ, ಬೆಳಗಿನ ಜಾವ ಆತ ತೀವ್ರ ಅಸ್ವಸ್ಥನಾಗಿದ್ದ.
ತಕ್ಷಣ ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಯುವಕನ ಮೃತದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹೆಚ್‌ಎಎಲ್ ಪೊಲೀಸರು, ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪಿಜಿ ನಿರ್ವಹಣೆಯ ಅಜಾಗರೂಕತೆ ಬಗ್ಗೆಯೂ ತನಿಖೆ ನಡೆಯುತ್ತಿದೆ.

