ಹೊಸ ದಿಗಂತ ವರದಿ, ಚಿತ್ರದುರ್ಗ:
ಅನಗತ್ಯ ವಿವಾದಗಳ ಕಡೆ ಗಮನ ಕೊಟ್ಟು ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳಿದರು.
ನಗರದ ವಿ.ಪಿ. ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಪಟುಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಅವಕಾಶ ಸಿಕ್ಕರೆ ಬಾಲಕಿಯರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಆದರೆ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಪೋಷಕರು ಮುಕ್ತ ಅವಕಾಶ ನೀಡಬೇಕು. ಯಾರಲ್ಲಿ ಎಂತಹ ಅಗಾಧವಾದ ಪ್ರತಿಭೆ ಇದೆ ಎನ್ನುವುದನ್ನು ಹೇಳಲು ಆಗುವುದಿಲ್ಲ. ಬುದ್ಧಿವಂತಿಕೆಯನ್ನು ಅನಾವರಣಗೊಳಿಸಿ ಸ್ವಾಲಂಬಿಗಳಾಗಿ ಬದುಕುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಬೇಕಿಲ್ಲದಿರುವ ವಿಷಯಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರು ಗಮನ ಕೊಡುತ್ತಿರುವುದನ್ನು ಎಲ್ಲಾ ಕಡೆ ನೋಡುತ್ತಿದ್ದೇವೆ. ಚನ್ನಾಗಿ ಓದಿ ಸರ್ಕಾರಿ ನೌಕರಿ ಪಡೆದುಕೊಂಡು ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಿ ಕುಟುಂಬಕ್ಕೆ ಆಧಾರವಾಗಬೇಕು. ಎಲ್ಲರಿಗೂ ಒಂದೊಂದು ಜಾತಿ, ಧರ್ಮವಿದೆ. ಅದೆಲ್ಲ ಮನೆಯಲ್ಲಿರಬೇಕು. ಬೀದಿಗೆ ಬಂದು ವಿವಾದಕ್ಕೆ ಸಿಕ್ಕಿಕೊಳ್ಳಬಾರದೆಂದು ಕಿವಿಮಾತು ಹೇಳಿದರು.
ಸಮಯ ವ್ಯರ್ಥ ಮಾಡಬೇಡಿ. ಧರ್ಮ, ಸಂಸ್ಕೃತಿ, ಭಾಷೆ ಇವೆಲ್ಲವನ್ನೂ ಮೀರಿ ಬದುಕು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಶಿಕ್ಷಕರು ಮತ್ತು ಪೋಷಕರುಗಳ ಜವಾಬ್ದಾರಿ ಬಹಳಷ್ಟಿದೆ ಎಂದರು.
ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿ, ಎಲ್ಲರೂ ಭಾರತೀಯರೆಂಬ ಭಾವನೆಯನ್ನು ಮೊದಲು ರೂಢಿಸಿಕೊಳ್ಳಬೇಕು. ಯಾವುದೇ ಕ್ರೀಡೆಯಾಗಲಿ ಸತತ ಪರಿಶ್ರಮ ಮತ್ತು ತರಬೇತಿಯಿಂದ ಮಾತ್ರ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯ. ಓದಿನ ಜೊತೆ ಕ್ರೀಡೆಗೂ ಆದ್ಯತೆ ನೀಡಿದಾಗ ಕ್ರೀಡೆ ಮತ್ತು ನೌಕರಿಯಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಎಲ್ಲರ ತಲೆಯಲ್ಲಿಯೂ ಬುದ್ಧಿ ಇದ್ದೇ ಇರುತ್ತದೆ. ಅದನ್ನು ಹೇಗೆ ಬೆಳೆಸಿಕೊಳ್ಳುತ್ತಾರೋ ಅದರ ಮೇಲೆ ಭವಿಷ್ಯ ನಿಂತಿದೆ. ಸರ್ಕಾರದಿಂದ ಕ್ರೀಡೆಗೆ ಸಾಕಷ್ಟು ಸವಲತ್ತುಗಳಿವೆ. ಎಲ್ಲವನ್ನು ಬಳಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ವೆಸ್ಟ್ರನ್ ಹಿಲ್ಸ್ ಶಾಲೆಯ ಪ್ರಾಚಾರ್ಯರಾದ ರಿಜ್ವಾನ್ ಮಾತನಾಡಿ, ನಮ್ಮ ಜಿಲ್ಲೆ ಮತ್ತು ರಾಜ್ಯದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲಿರುವ ನಿಮ್ಮಗಳ ಸಾಧನೆ ದೊಡ್ಡದು. ಸಾಧನೆ ಸಾಧಕರ ಸ್ವತ್ತೇ ವಿನಃ ಸೋಮಾರಿಗಳ ಸ್ವತ್ತಾಗಲಾರದು ಎಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ಶುಭ ಕೋರಿದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಂ.ಹೆಚ್.ಜಯಣ್ಣ ಮಾತನಾಡಿ, ಕ್ರೀಡೆಯ ಮೂಲಕ ಮಾನವೀಯ ಮೌಲ್ಯ ಭಾವೈಕ್ಯತೆಯನ್ನು ಹಂಚಿಕೊಳ್ಳಿ. ಕ್ರೀಡೆಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬಹುದು. ಮನೆಯಲ್ಲಿ ಪೋಷಕರುಗಳು ತಮ್ಮ ಮಕ್ಕಳಿಗೆ ಯಾವ ರಂಗದಲ್ಲಿ ಆಸಕ್ತಿ ಇದೆ ಎನ್ನುವುದನ್ನು ಗುರುತಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಮುಖ್ಯ ಶಿಕ್ಷಕ ವೆಂಕಟಾಪತಿ ಮತನಾಡಿ, ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿಸ್ತಾರವಾದ ಆಟದ ಮೈದಾನ ಹೊಂದಿದ್ದು, ಕಟ್ಟಡಗಳು ಶಿಥಿಲಗೊಂಡಿವೆ. ಹಾಗಾಗಿ ಸರ್ಕಾರದಿಂದ ಕಟ್ಟಡಗಳ ರಿಪೇರಿಗೆ ನೆರವು ಕೊಡಿಸುವಂತೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ವಿನಂತಿಸಿಕೊಂಡರು.
೧೫ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ರಾಷ್ಟ್ರೀಯ ಹ್ಯಾಂಡ್ ಬಾಲ್‌ಗೆ ಆಯ್ಕೆಯಾಗಿರುವ ತಬಸುಂ, ಎನ್.ಟಿ. ಉಷಾ, ಎಸ್.ಪೂಜಾ, ಸಾನಿಯಾ, ಫಿಝಾಕೌಸರ್ ಇವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಹೆಚ್.ಶಿವರಾಮು, ಬಿಟ್ಸ್ ಹೈ-ಟೆಕ್ ಕಾಲೇಜಿನ ಪ್ರಾಚಾರ್ಯ ರವೀಂದ್ರ ಕೆ.ಬಿ, ಪತ್ರಕರ್ತ ರವಿ ಮಲ್ಲಾಪುರ ವೇದಿಕೆಯಲ್ಲಿದ್ದರು. ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆ ಖಜಾಂಚಿ ಪ್ರೇಮಾನಂದ್ ಸಿ.ಎಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಹಾಗೂ ಮುಖ್ಯ ತರಬೇತುದಾರ ಕೆ.ಎಸ್. ಕಾರ್ತಿಕ್ ಈ ಸಂದರ್ಭದಲ್ಲಿ ಹಾಜರಿದ್ದರು.