ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಆಂಧ್ರ ಮೂಲದ ಬಿಬಿಎಂ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ದೇವಿಶ್ರೀ (21) ಹತ್ಯೆಯಾದ ವಿದ್ಯಾರ್ಥಿನಿ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎನ್ನುವ ಸ್ನೇಹಿತನೊಂದಿಗೆ ಇನ್ನೊಬ್ಬ ಹುಡುಗಿಯ ರೂಂಗೆ ಹೋಗಿದ್ದಳು. ಆದರೆ ರಾತ್ರಿ ವಾಪಸ್ ಮರಳದೇ ಇದ್ದುದರಿಂದ ಅನುಮಾನಗೊಂಡ ಕುಟುಂಬ ಮತ್ತು ರೂಂಮೇಟ್ಸ್ ಮಾಹಿತಿ ನೀಡಿದ ನಂತರ ಪ್ರಕರಣ ಬಹಿರಂಗವಾಗಿದೆ.
ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ, ರೂಮಿನೊಳಗೇ ದೇವಿಶ್ರೀಯನ್ನು ಭೀಕರವಾಗಿ ಹತ್ಯೆ ಮಾಡಲಾಗಿರುವುದು ಪತ್ತೆಯಾಗಿದೆ. ಘಟನೆ ಬಳಿಕ ಆರೋಪಿಯಾದ ಪ್ರೇಮ್ ವರ್ಧನ್ ಮಾತ್ರ ಒಬ್ಬನೇ ಸ್ಥಳದಿಂದ ಹೊರಬಂದಿರುವುದು ಶಂಕೆಗೀಡಾಗಿದ್ದು, ಆತ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಿಂದ ಕೊಲೆಗೆ ಕಾರಣವಾದ ನಿಜಾಂಶ ಇನ್ನೂ ಸ್ಪಷ್ಟವಾಗಿಲ್ಲ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರೆಸಲಾಗಿದೆ.

