ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಜರಾತಿ ಕಡಿಮೆ ಇದ್ದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡದ ಪ್ರಾಧ್ಯಾಪಕನ ಮೇಲೆ ಪ್ರಥಮ ವರ್ಷದ ಎಂಟೆಕ್ (ಟ್ರಾನ್ಸ್ಪೋರ್ಟ್ ಎಂಜಿನಿಯರಿಂಗ್) ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಆಂಧ್ರಪ್ರದೇಶದ ಐಐಐಟಿ ನೂಜಿವಿಡುನಲ್ಲಿ ಘಟನೆ ನಡೆದಿದ್ದು, ಆರೋಪಿ ಮಜ್ಜಿ ವಿನಾಯಕ ಪುರುಷೋತ್ತಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಮೂಲದ ವಿದ್ಯಾರ್ಥಿ ಮಜ್ಜಿ ವಿನಾಯಕ ಪುರುಷೋತ್ತಮ್, ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಬೆಳಗ್ಗೆ ಪರೀಕ್ಷಾ ಕೊಠಡಿಗೆ ಬಂದಿದ್ದ. ಈ ವೇಳೆ, ಪರೀಕ್ಷಾ ಮೇಲ್ವಿಚಾರಕರಾಗಿದ್ದ ಸಿವಿಲ್ ವಿಭಾಗದ ಉಪನ್ಯಾಸಕ ಎಸ್.ಎಸ್.ಎಸ್.ವಿ. ಗೋಪಾಲರಾಜು, ನಿನಗೆ ಪರೀಕ್ಷೆ ಬರೆಯುವುದಕ್ಕೆ ಅಗತ್ಯ ಇರುವಷ್ಟು ಹಾಜರಾತಿ ಇಲ್ಲ. ನಿನ್ನ ವಿಭಾಗದ ಮುಖ್ಯಸ್ಥರಿಂದ ಅನುಮತಿ ತೆಗೆದುಕೊಂಡು ಬರುವಂತೆ ವಿದ್ಯಾರ್ಥಿಗೆ ತಿಳಿಸಿದ್ದಾರೆ.
ವಿನಾಯಕ ತನ್ನ ವಿಭಾಗದ ಮುಖ್ಯಸ್ಥರನ್ನು ಭೇಟಿಯಾದಾಗ ಅವರು, ಹಾಜರಾತಿ ಕೊರತೆ ಇರುವ ಕಾರಣ ನಿನಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೂ ವಿನಾಯಕ ಮತ್ತೆ ಪರೀಕ್ಷಾ ಕೊಠಡಿಗೆ ಬಂದಿದ್ದಾನೆ. ಈ ವೇಳೆ ಪರೀಕ್ಷಾ ಮೇಲ್ವಿಚಾರಕರಾದ ಉಪನ್ಯಾಸಕ ಗೋಪಾಲರಾಜು, ಹೆಚ್ಒಡಿ ಪರೀಕ್ಷೆ ಬರೆಯಲು ಅನುಮತಿಸದ ಕಾರಣ ಹೊರಗೆ ಹೋಗುವಂತೆ ವಿದ್ಯಾರ್ಥಿಗೆ ಸೂಚಿಸಿದ್ದಾರೆ. ಆದರೂ ವಿದ್ಯಾರ್ಥಿ ಹೊರಗೆ ಹೋಗದಿದ್ದಾಗ ಭದ್ರತಾ ಸಿಬ್ಬಂದಿಯನ್ನು ಕರೆಯಲು ಮುಂದಾದಾಗ, ಕೋಪಗೊಂಡ ವಿದ್ಯಾರ್ಥಿ ತನ್ನ ಜೇಬಿನಿಂದ ಒಂದು ಸಣ್ಣ ಚಾಕು ಹೊರತೆಗೆದು ಪ್ರಾಧ್ಯಾಪಕರ ಮೇಲೆ ದಾಳಿಗೆ ಯತ್ನಿಸಿದ್ದಾನೆ.
ಕೆಲವು ವಿದ್ಯಾರ್ಥಿಗಳು ಆತನನ್ನು ತಡೆದು ಚಾಕು ಕಸಿದುಕೊಂಡಿದ್ದಾರೆ. ನಂತರ ವಿನಾಯಕ ತನ್ನ ಜೇಬಿನಿಂದ ಮತ್ತೊಂದು ಚಾಕುವನ್ನು ಹೊರತೆಗೆದು ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ವಿದ್ಯಾರ್ಥಿಗಳು ವಿನಾಯಕನನ್ನು ಹಿಡಿದು ಕೊಠಡಿಯೊಳಗೆ ತಳ್ಳಿ ಬೀಗ ಹಾಕಿದ್ದಾರೆ.
ಹಣೆ, ಕುತ್ತಿಗೆಯ ಮೇಲ್ಭಾಗ ಮತ್ತು ಭುಜಕ್ಕೆ ಹಲವು ಬಾರಿ ಇರಿಯಲಾಗಿದೆ. ಗಾಯಗೊಂಡಿರುವ ಪ್ರಾಧ್ಯಾಪಕನನ್ನು ನೂಜಿವಿಡು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಪ್ರಾಧ್ಯಾಪಕ ಗೋಪಾಲರಾಜು ಅವರಿಗೆ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.