ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್.ಎಸ್.ಪಿ.ಯು. ಕಾಲೇಜಿಗೆ ಗುರುವಾರ ಮಧ್ಯಾಹ್ನ ರಾಜ್ಯ ಮುಜರಾಯಿ ಆಯುಕ್ತ ಎಚ್. ಬಸವರಾಜೇಂದ್ರ ಅವರಿಗೆ ಕಾಲೇಜಿನ ವಿದ್ಯಾರ್ಥಿಗಳು ಅದ್ದೂರಿಯ ಸ್ವಾಗತ ಕೋರಿದರು.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1100 ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದ ಅಭಿವೃದ್ಧಿ ಶುಲ್ಕವನ್ನು ಕಡಿತಗೊಳಿಸಿ ಗ್ರಾಮೀಣ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬೆನ್ನೆಲುಬಾಗಿ ನಿಂತಿದ್ದರು.ಈ ಮೂಲಕ ಅಧಿಕವಿದ್ದ ಕಾಲೇಜು ಶುಲ್ಕವನ್ನು ಅತ್ಯಲ್ಪಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಸಹಕಾರ ಮಾಡಿದ ಆಯುಕ್ತರಿಗೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು.
ಮಕ್ಕಳಿಗೇ ಪುಷ್ಪ ಹಾಕಿದ ಆಯುಕ್ತಕರು
ಸುಮಾರು 1110 ವಿದ್ಯಾರ್ಥಿಗಳು ಕಾಲೇಜಿನ ಗೇಟ್ ನಿಂದ ಕಾಲೇಜಿನ ತನಕ ಇಕ್ಕೆಲದಲ್ಲಿ ಸಾಗಿ ನಿಂತು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ತನಗೆ ಹಾಕಿದ ಪುಷ್ಪಗಳನ್ನು ಕರದಲ್ಲಿ ಹಿಡಿದು ಮತ್ತೆ ವಿದ್ಯಾರ್ಥಿಗಳ ಮೇಲೆಯೇ ಪುಷ್ಪಗಳನ್ನು ಹಾಕಿದರು.
ಬೆನ್ನು ತಟ್ಟಿದ ಆಯುಕ್ತರು
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿವೃದ್ಧಿ ಶುಲ್ಕ ಕಡಿತಗೊಳಿಸಿ ಕಾಲೇಜಿನ ಶುಲ್ಕವನ್ನು ಅತೀ ಕಡಿಮೆ ಗೊಳಿಸಿ ಸಹಕಾರ ನೀಡಿದ ಆಯುಕ್ತರಿಗೆ ಧನ್ಯವಾದ ಸಮರ್ಪಿ ಸಿದರು. ಈ ಸಂದರ್ಭ ವಿದ್ಯಾರ್ಥಿಗಳ ಹೆಗಲ ಮೇಲೆ ಕೈಯಿಟ್ಟು ಉತ್ತಮವಾಗಿ ಅಧ್ಯಾಯನ ಮಾಡಿ ಭವಿಷ್ಯದಲ್ಲಿ ಪ್ರಗತಿ ಸಾಧಿಸಿ ಎಂದರು.
ಶೇ.100 ಫಲಿತಾಂಶವೇ ನನಗೆ ಕೊಡುವ ಗಿಫ್ಟ್
ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಅಭಿವೃದ್ಧಿ ಶುಲ್ಕ ವನ್ನು ಕಡಿತಗೊಳಿಸಿರುವುದರಿಂದ ಗ್ರಾಮೀಣ ಪ್ರದೇಶವಾದ ಈ ಭಾಗದ ಮಕ್ಕಳಿಗೆ ಹೆಚ್ಚಿನ ಅನುಕೂಲತೆ ಒದಗಿದೆ ಅನ್ನುವುದು ಸಂತಸ. ಮುಂದಿನ ಅಂತಿಮ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ತರುವುದೇ ನನಗೆ ಕೊಡಬೇಕಾದ ಗಿಪ್ಟ್ ಎಂದರು.
ಗೌರವಾರ್ಪಣೆ
ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಿದ ಮತ್ತು ಉಪನ್ಯಾಸಕರಿಗೆ ಶ್ರೀ ದೇವಳದಿಂದ ವೇತನ ಒದಗಿಸಿದ ಆಯುಕ್ತರಿಗೆ ಕಾಲೇಜಿನ ವತಿಯಿಂದ ಗೌರವಾರ್ಪಣೆ ಅರ್ಪಿಸಲಾಯಿತು.
ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್, ಮುಖ್ಯಗುರು ಕೆ.ಯಶವಂತ ರೈ ಸೇರಿದಂತೆ ಶ್ರೀ ದೇವಳದ ಸಿಬ್ಬಂದಿಗಳು ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.