ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಹಕಾರಿ ಕಾರ್ಮಿಕರ ಸಂವಾದಲ್ಲಿ ತಮ್ಮ ರಾಜಕೀಯ ನಿವೃತ್ತಿ ನಂತರದ ಜೀವನದ ಬಗ್ಗೆ ಮಾತನಾಡಿದ್ದಾರೆ.
ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ಸಹಕಾರಿ ಕಾರ್ಮಿಕರ ಮಹಿಳೆಯರೊಂದಿಗೆ ‘ಸಹಕಾರ್ ಸಂವಾದ’ದಲ್ಲಿ ಪಾಲ್ಗೊಂಡು ಅಮಿತ್ ಶಾ , ನಿವೃತ್ತಿಯ ನಂತರ ನನ್ನ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯನ್ನು ಅಧ್ಯಯನ ಮಾಡಲು ಮೀಸಲಿಡಬೇಕೆಂದು ನಾನು ನಿರ್ಧರಿಸಿದ್ದೇನೆಎಂದು ಹೇಳಿದ್ದಾರೆ.
ಈ ಮೂಲಕ ತಾವು ರಾಜಕೀಯ ನಿವೃತ್ತಿ ಹೊಂದಿದ ನಂತರ ಏನು ಮಾಡಬೇಕು ಎಂಬುದರ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದರು.
ರಾಜಕೀಯ ನಿವೃತ್ತಿಯ ನಂತರದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯ ಅಧ್ಯಯನಕ್ಕೆ ಮೀಸಲಿಡಲು ನಿರ್ಧರಿಸಿದ್ದೇನೆ. ನೈಸರ್ಗಿಕ ಕೃಷಿ ಅನ್ನೋದು ವೈಜ್ಞಾನಿಕ ಪ್ರಯೋಗವಿದ್ದಂತೆ. ರಾಸಾಯನಿಕ ರಸಗೊಬ್ಬರ ಬಳಸಿ ಬೆಳೆದಿರುವ ಗೋಧಿ ಸೇವನೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೈಸರ್ಗಿಕ ಕೃಷಿ ದೇಹವನ್ನು ರೋಗ ಮುಕ್ತವಾಗಿಡಲು ಸಾಧ್ಯವಾಗುತ್ತದೆ. ಹಾಗಾಗಿ ನೈಸರ್ಗಿಕ ಕೃಷಿ ಅನ್ನೋದು ಪ್ರಯೋಗ. ನೈಸರ್ಗಿಕ ಪದ್ದತಿ ಅಳವಡಿಕೆ ಮಾಡಿಕೊಂಡರೆ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇದೇ ವೇಳೆ ಮಾತನಾಡಿದ ಅಮಿತ್ ಶಾ, ಸಹಕಾರದ ಮೂಲಕ ಸಮೃದ್ಧಿ ಎಂಬ ಯೋಜನೆಯು ರೈತರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಗ್ರಾಮೀಣ ಆರ್ಥಿಕತೆಯ ಜೊತೆ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ರೈತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ತಂದಿದ್ದಾರೆ ಎಂದು ಹೇಳಿದರು.
ಸಂವಾದದಲ್ಲಿ ನಾನು ಚಿಕ್ಕವನಿದ್ದಾಗ ಬನಸ್ಕಂತ್‌ನಲ್ಲಿ ಜನರಿಗೆ ವಾರಕ್ಕೊಮ್ಮೆ ಸ್ನಾನ ಮಾಡಲು ನೀರು ಸಿಗುತ್ತಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜನರಿಗೆ ಈ ವಿಷಯ ಗೊತ್ತಿರಲಿಲ್ಲ. ಬನಸ್ಕಾಂತ ಮತ್ತು ಕಚ್ ಅತಿ ಹೆಚ್ಚು ನೀರಿನ ಕೊರತೆಯನ್ನು ಹೊಂದಿರುವ ಗುಜರಾತಿನ ಜಿಲ್ಲೆಗಳಾಗಿವೆ. ಈ ಭಾಗದ ಒಂದು ಕುಟುಂಬ ಕೇವಲ ಹೈನುಗಾರಿಕೆಯಿಂದಲೇ ವಾರ್ಷಿಕವಾಗಿ 1 ಕೋಟಿ ರೂ. ಅಧಿಕ ಸಂಪಾದನೆ ಮಾಡುತ್ತಿದೆ. ಇದು ಅತಿದೊಡ್ಡ ಬದಲಾವಣೆಯಾಗಿದೆ ಎಂದು ಹೇಳಿದರು.