ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿರುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಕುರಿತು ವಿಸ್ತೃತ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸೂಚಿಸಿದ್ದಾರೆ.
ಸಭೆ ನಡೆಸಿ ಮಾತನಾಡಿದ ಕೈಗಾರಿಕಾ ಸಚಿವರು, ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮ ನಡೆಸಲು ಅನುಮತಿ ನಡೆಸುವಾಗ ಸರಕಾರವು ಹಲವು ಮಾನದಂಡಗಳನ್ನು ನೀಡಿರುತ್ತದೆ. ಆದರೆ ನಂತರದ ದಿನಗಳಲ್ಲಿ ಏನಾಗುತ್ತದೆ ಎನ್ನುವುದರ ಪರಿಶೀಲನೆ ಕೂಡ ಅಗತ್ಯ ಎಂದರು.
ಮುಂದಿನ ದಿನಗಳಲ್ಲಿ ಕೈಗಾರಿಕಾ ಮಾಲಿನ್ಯದ ಕುರಿತು ಉನ್ನತ ಮಟ್ಟದ ತಂಡಗಳಿಂದ ಅಧ್ಯಯನ ನಡೆಸಲಾಗುವುದು. ಈ ತಂಡಗಳು ಎಲ್ಲಾ ಕೈಗಾರಿಕಾ ಪ್ರದೇಶಗಳಿಗೂ ಖುದ್ದು ಭೇಟಿ ನೀಡಿ, ಮಾಲಿನ್ಯದ ತೀವ್ರತೆ ಆಧರಿಸಿ, ಆಯಾ ಉದ್ಯಮಗಳು ಯಾವ ಬಗೆಯ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದನ್ನೂ ತಿಳಿಸಲಿದೆ ಎಂದರು.