ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನಲ್ಲಿ ಸರಣಿ ದುರಂತಗಳು ನಡೆಯುತ್ತಿವೆ. ಕೃಷ್ಣಂರಾಜು, ಕೃಷ್ಣ, ಕೈಕಳ ಸತ್ಯನಾರಾಯಣ ಮತ್ತು ಚಲಪತಿ ರಾವ್ ಅವರ ಸಾವು ಮರೆಯುವ ಮುನ್ನವೇ ಜಮುನಾ ಅವರ ನಿಧನವಾಗಿತ್ತು. ಇದೀಗ ತೆಲುಗಿನ ಜನಪ್ರಿಯ ನಿರ್ದೇಶಕ ‘ವಿದ್ಯಾಸಾಗರ್ ರೆಡ್ಡಿ’ ಇಂದು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮ್ಮ 40 ವರ್ಷಗಳ ಚಲನಚಿತ್ರ ಜೀವನದಲ್ಲಿ ಸುಮಾರು 30 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನರೇಶ್ ಮತ್ತು ವಿಜಯ ಶಾಂತಿ ಕಾಂಬಿನೇಷನ್ ನಲ್ಲಿ ‘ರಾಕಾಸಿ ಲೋಯ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ವಿದ್ಯಾಸಾಗರ್ ಮೊದಲ ಸಿನಿಮಾದಲ್ಲೇ ಹಿಟ್ ಪಡೆದರು. ಆ ನಂತರವೂ ಸ್ಟೀವರ್ತುಪುರಂ ಕಳ್ಳರು, ಅಮ್ಮದೊಂಗ, ರಾಮಸಕ್ಕನೋಡು ಮುಂತಾದ ಹಿಟ್ ಚಿತ್ರಗಳೊಂದಿಗೆ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಕಂಡರು. ಸುಮನ್ ಮತ್ತು ಬಾಲಚಂದರ್ ಜೊತೆ ಹಲವು ಸಿನಿಮಾ ಮಾಡಿರುವ ವಿದ್ಯಾಸಾಗರ್, ಕೃಷ್ಣ, ರವಿತೇಜ ಜೊತೆ ಸಿನಿಮಾಗಳನ್ನೂ ನಿರ್ದೇಶನ ಮಾಡಿದ್ದಾರೆ.
ಸುಮನ್ ಅಭಿನಯದ ರಾಮಸಕ್ಕನೋಡು ಚಿತ್ರಕ್ಕಾಗಿ ಅವರು ಮೂರು ನಂದಿ ಪ್ರಶಸ್ತಿಗಳನ್ನು ಪಡೆದರು. ಇಂಡಸ್ಟ್ರಿಯಲ್ಲಿ ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದ ಶ್ರೀನು ವೈಟ್ಲ ಕೂಡ ಇವರ ಶಿಷ್ಯ. ಸಾಗರ್ ಮೂರು ಬಾರಿ ತೆಲುಗು ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳಗಿರಿ ಸಮೀಪದ ನಿಡಮರ್ರು ಎಂಬ ಗ್ರಾಮದಲ್ಲಿ ಮಾರ್ಚ್ 1, 1952 ರಂದು ಜನಿಸಿದ ವಿದ್ಯಾಸಾಗರ ರೆಡ್ಡಿ ಅವರು 70 ನೇ ವಯಸ್ಸಿನಲ್ಲಿ ಕಣ್ಣುಮುಚ್ಚಿದ್ದಾರೆ. ಅವರ ನಿಧನದ ಸುದ್ದಿಗೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.