ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 25 ರಂದು ತೆರೆಕಂಡ ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆಗೊಂಡ ದಿನದಿಂದಲೇ ಅದ್ಭುತ ಪ್ರದರ್ಶನ ನೀಡುತ್ತಿದ್ದು, ವಾರದ ಮಧ್ಯಭಾಗವಾದ ಬುಧವಾರದ ದಿನವೂ ಬಂಗಾರದ ಬೆಳೆ ತೆಗೆದಿದೆ. ನಿರೀಕ್ಷೆಗೂ ಮೀರಿ ಸಾಗುತ್ತಿರುವ ಕಲೆಕ್ಷನ್ ಚಿತ್ರತಂಡದ ಮುಖದಲ್ಲಿ ನಗು ಮೂಡಿಸಿದೆ. ಹೊಸ ತಂಡ, ಯಾವುದೇ ಸ್ಟಾರ್‌ಗಳಿಲ್ಲದಿದ್ದರೂ ಈ ಚಿತ್ರ ನೀಡುತ್ತಿರುವ ಸಾಧನೆ ಕನ್ನಡ ಚಿತ್ರರಂಗಕ್ಕೆ ಹೊಸ ಶಕ್ತಿ ತುಂಬಿದೆ.
ಬುಧವಾರ ಈ ಚಿತ್ರ 3.50 ಕೋಟಿ ರೂ. ಗಳಿಸಿದ್ದು, ವಾರದ ಮಧ್ಯದ ದಿನದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿರುವುದು ಅಪರೂಪದ ಸಾಧನೆ ಎಂದರು ತಪ್ಪಾಗಲಾರದು. ಇದೀಗ ಲಭ್ಯವಿರುವ ಲೆಕ್ಕಾಚಾರಗಳ ಪ್ರಕಾರ, ಈ ಚಿತ್ರ ವಿಶ್ವದಾದ್ಯಂತ ಒಟ್ಟು 19 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಪೈಕಿ ಭಾರತದಲ್ಲೇ ಸುಮಾರು 16.20 ಕೋಟಿ ರೂಪಾಯಿ ಕಲೆಕ್ಷನ್ ಆಗಿರುವುದು ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ಶನಿವಾರ, ಭಾನುವಾರದ ಶೋಗಳಿಗೆ ಹೆಚ್ಚಿದ Crowd ಸೋಮವಾರದಿಂದ ಕುಂಠಿತಗೊಳ್ಳುವುದು ಸಹಜ. ಆದರೆ ‘ಸು ಫ್ರಮ್ ಸೋ’ಗೆ ಈ ನಿಯಮಗಳು ಅನ್ವಯಿಸುತ್ತಿಲ್ಲ. ಭಾನುವಾರದಿಂದ ಬುಧವಾರದವರೆಗೆ ಪ್ರತಿದಿನವೂ ಚಿತ್ರವು ಸರಾಸರಿ 3-3.5 ಕೋಟಿ ಗಳಿಸುತ್ತಿದ್ದು, ಇದು ಚಿತ್ರತಂಡದ ಸಮರ್ಪಣೆ ಹಾಗೂ ಜನಮನ್ನಣೆಗೆ ಸಾಕ್ಷಿಯಾಗಿದೆ.
ಈ ಚಿತ್ರ ಮಲಯಾಳಂ ಭಾಷೆಯಲ್ಲೂ ಆಗಸ್ಟ್ 1ರಂದು ರಿಲೀಸ್ ಆಗಲಿದೆ. ಈ ನಿಟ್ಟಿನಲ್ಲಿ, ಖ್ಯಾತ ನಟ ದುಲ್ಕರ್ ಸಲ್ಮಾನ್ ಈ ಚಿತ್ರದ ಮಲಯಾಳಂ ವಿತರಣೆ ಹೊಣೆಯನ್ನೆತ್ತಿಕೊಂಡಿದ್ದು, ಇನ್ನಷ್ಟು ರಾಜ್ಯಗಳಲ್ಲಿ ಸಿನಿಮಾದ ತಲುಪುವಿಕೆ ಹಾಗೂ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ.