ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ (Su From So) ಸಿನಿಮಾಗೆ ರಿಲೀಸ್ ಆಗಿ ಈಗಾಗಲೇ ಒಂದು ವಾರ ಕಳೆದಿದ್ದು, ದಿನದಿಂದ ದಿನಕ್ಕೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ದಾಖಲಿಸುತ್ತಿದೆ. ಆದರೆ ಗುರುವಾರ (ಜುಲೈ 31) ಮೊದಲ ಬಾರಿಗೆ ಚಿತ್ರದ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಗುರುವಾರ ಕೇವಲ 1.5 ಕೋಟಿ ಗಳಿಕೆಯಾಗಿರುವುದು ವರದಿಯಾಗಿದೆ.
ಈ ಸಿನಿಮಾ ಜುಲೈ 25ರಂದು ತೆರೆಗೆ ಬಂದಿದ್ದು, ಆರಂಭದಲ್ಲಿ ಶೋಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಮೊದಲ ದಿನ ಕೇವಲ 78 ಲಕ್ಷ ಗಳಿಕೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಪ್ರತಿ ದಿನವೂ ಸರಾಸರಿ 3 ಕೋಟಿ ಹಾಗೂ ಅದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶೇಷವಾಗಿ ಭಾನುವಾರದಿಂದ ಬುಧವಾರದವರೆಗೆ ಚಿತ್ರ ನಿರಂತರ ಯಶಸ್ಸು ಕಂಡಿತ್ತು.
ಗುರುವಾರ ತೆಲುಗಿನಲ್ಲಿ ‘ಕಿಂಗ್‌ಡಮ್’ ಸಿನಿಮಾ ಬಿಡುಗಡೆಯಾದ ಕಾರಣದಿಂದ ‘ಸು ಫ್ರಮ್ ಸೋ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಆದರೂ, ಚಿತ್ರದ ಹವಾ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಮುನ್ನವೇ ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೊಂಡಿರುವ ಕಾರಣ, ಈ ವೀಕೆಂಡ್‌ನಲ್ಲಿ ಕಲೆಕ್ಷನ್ ಮತ್ತೆ ಚುರುಕಾಗುವ ನಿರೀಕ್ಷೆಯಿದೆ.
ಆಗಸ್ಟ್ 1ರಂದು ‘ಸು ಫ್ರಮ್ ಸೋ’ ಚಿತ್ರ ಕೇರಳದಲ್ಲಿಯೂ ಬಿಡುಗಡೆಯಾಗಿದೆ. ಅಲ್ಲಿಯೂ ಪ್ರೀಮಿಯರ್ ಶೋಗಳು ಯಶಸ್ವಿಯಾಗಿ ನಡೆದಿದ್ದು, ಪ್ರೇಕ್ಷಕರಿಂದ ಶ್ಲಾಘನೆ ಕೂಡ ಸಿಕ್ಕಿದೆ.
ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿ, ನಿರ್ಮಾಣವೂ ಮಾಡಿದ್ದಾರೆ. ಜೆಪಿ ತುಮಿನಾಡ ಅವರ ನಿರ್ದೇಶನ ಚಿತ್ರಕ್ಕೆ ಜೀವ ತುಂಬಿದ್ದು, ಸುಮೇಧ್ ಸಂಗೀತ ಸಹ ಅನುಭವವನ್ನು ಇನ್ನಷ್ಟು ಆಳಕ್ಕಿಳಿಯುವಂತೆ ಮಾಡಿದೆ. ಈ ಎಲ್ಲ ಅಂಶಗಳು ಸೇರಿ ‘ಸು ಫ್ರಮ್ ಸೋ’ನ್ನು 2025ರ ಒಂದು ಪ್ರಮುಖ ಯಶಸ್ವಿ ಚಿತ್ರವನ್ನಾಗಿ ಮಾಡುತ್ತಿದೆ.