ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶ, ಪಶ್ಚಿಮ ಘಟ್ಟ, ಕುಮಾರಪರ್ವತ ಭಾಗಗಳಲ್ಲಿ ಗುರುವಾರ ದಿನವಿಡೀ ಸುರಿದ ಭಾರೀ ಮಳೆಗೆ ಪುಣ್ಯ ನದಿ ಕುಮಾರಧಾರಾದಲ್ಲಿ ಭಾರೀ ಪ್ರವಾಹ ಹರಿದು ಬಂದಿದೆ.
ಗುರುವಾರ ಸಂಜೆಯ ವೇಳೆಗೆ ಕುಮಾರಧಾರಾ ಪ್ರವಾಹವು ಮತ್ತಷ್ಟು ಅಧಿಕಗೊಂಡಿದ್ದು ಕುಮಾರಧಾರಾದ ತಿರುಗಣೆಗುಂಡಿ ಎಂಬಲ್ಲಿ ಕುಮಾರಧಾರಾ ನದಿಯು ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ಅಂತರ್ ರಾಜ್ಯ ಹೆದ್ದಾರಿಯನ್ನು ವ್ಯಾಪಿಸಿದೆ ಈ ಕಾರಣದಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ರಸ್ತೆಗೆ ನೀರು ವ್ಯಾಪಿಸಿರುವುದರಿಂದ ಪುತ್ತೂರು-ಸುಬ್ರಹ್ಮಣ್ಯ ಸಂಚಾರ ಬಂದ್ ಆಗಿದೆ.
ದೇವರಹಳ್ಳಿ ರಸ್ತೆ ಬ್ಲಾಕ್
ಯೇನೆಕಲ್ಲಿನ ಮಧುವನ ಬಳಿಯಿಂದ ದೇವರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಲ್ಲಾಜೆ ಹೊಳೆಯಲ್ಲಿನ ಪ್ರವಾಹದಿಂದ ಮುಳುಗಡೆಯಾಗಿದೆ.ಈ ಕಾರಣದಿಂದ ಈ ರಸ್ತೆ ಸಂಚಾರವೂ ಸ್ಥಗಿತವಾಗಿದೆ. ಇದಲ್ಲದೆ ಪಂಜದ ಬೊಳ್ಮಲೆ ಸೇತುವೆ ಇತ್ಯಾದಿಗಳು ಮುಳುಗಡೆ ಭೀತಿ ಎದುರಿಸುತ್ತಿದೆ.
ದರ್ಪಣತೀರ್ಥ ಸೇತುವೆ ಮುಳುಗಡೆ ಭೀತಿ
ಕುಮಾರಧಾರಾ ನದಿ ನೀರು ಕ್ಷಣ ಕ್ಷಣಕ್ಕೂ ಅಧಿಕವಾಗುತ್ತಿದ್ದು ತಿರುಣೆಗುಂಡಿಯಿಂದ ದರ್ಪಣತೀರ್ಥ ಸೇತುವೆ ತನಕ ವ್ಯಾಪಿಸುತ್ತಿದೆ.ಇದರಿಂದಾಗಿ ಕುಮಾರಧಾರಾ-ದೋಣಿಮಕ್ಕಿ ಸಂಪರ್ಕ ರಸ್ತೆ ಮುಳುಗಡೆಗೊಂಡಿದೆ.ಕುಮಾರಧಾರಾದಂತೆ ಇದರ ಉಪನದಿ ದರ್ಪಣತೀರ್ಥವು ತುಂಬಿ ಹರಿಯುತ್ತಿದ್ದು ದರ್ಪಣತೀರ್ಥ ಸೇತುವೆಯು ಮುಳುಗಡೆ ಭೀತಿ ಎದುರಿಸುತ್ತಿದೆ
ಕುಮಾರಧಾರಾ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ನೀರು ಕ್ಷಣ ಕ್ಷಣಕ್ಕೂ ಅಧಿಕಗೊಂಡು ಸ್ನಾನಘಟ್ಟದಿಂದ ಸುಮಾರು ೧೦೦ಮೀನಷ್ಟು ದೂರ ವ್ಯಾಪಿಸಿದೆ.ಕುಮಾರಧಾರಾದಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಇದೀಗ ನೀರು ನುಗ್ಗುವ ಆತಂಕ ಎದುರಾಗಿದೆ.ಶ್ರೀ ದೇವರ ಜಳಕದ ಕಟ್ಟೆ, ಶೌಚಾಲಯ ಮುಕ್ಕಾಲು ಭಾಗ ಮುಳುಗಡೆಗೊಂಡಿದೆ.ಡ್ರೆಸ್ಸಿಂಗ್ ಕೊಠಡಿಗಳು ಸಂಪೂರ್ಣ ಮುಳುಗಡೆಯಾಗಿದೆ.