October 13, 2026
Tuesday, October 13, 2026
spot_img

ಜಡಿಮಳೆಗೆ ತತ್ತರಿಸಿದ ಸುಬ್ರಹ್ಮಣ್ಯ ಪರಿಸರ: ಸಂಪರ್ಕ ಕಡಿತ ಭೀತಿಯಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಪಶ್ಚಿಮ ಘಟ್ಟದ ತಪ್ಪಲು ಭಾಗದಲ್ಲಿಯೂ ಕಳೆದ 24 ತಾಸುಗಳ ಅವಧಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕುಮಾರಧಾರಾ ನದಿಯಲ್ಲಿ ಪ್ರವಾಹದ ಸ್ಥಿತಿ ಕಂಡುಬಂದಿದೆ.


ಉಕ್ಕಿ ಹರಿಯುತ್ತಿರುವ ನದಿ ಹಾಗೂ ನಿರಂತರ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಬದಿ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಭಾರೀ ಮಣ್ಣಿನ ಸವೆತ ಉಂಟಾಗಿದ್ದು, ಈ ಭಾಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.


ಕುಮಾರಧಾರ ನದಿಯ ಉಪನದಿ ದರ್ಪಣತೀರ್ಥಕ್ಕೆ ನೂತನ ಸೇತುವೆ ನಿರ್ಮಾಣವಾಗಿದೆ.ಈ ಹಿಂದೆ ಸೇತುವೆಯಿಂದ ಮುಂದಕ್ಕೆ ನದಿ ನೀರು ಆವರಿಸಿ ಸಂಚಾರ ವ್ಯತ್ಯಯವಾಗುತ್ತಿದ್ದ ಕಾರಣ ರಸ್ತೆಯನ್ನು ಮಣ್ಣುಹಾಕಿ ಎತ್ತರೀಕರಿಸಲಾಗಿದೆ. ಇದರಿಂದಾಗಿ ಈ ಹಿಂದೆ ಇದ್ದ ನೀರು ಆವರಿಸುವ ಸಮಸ್ಯೆ ನಿವಾರಣೆಯಾಗಿದೆ.

ಆದರೆ ಇದೀಗ ಭಾರೀ ಪ್ರವಾಹಕ್ಕೆ ತಿರುಗಣೆಗುಂಡಿ ಎಂಬಲ್ಲಿ ಮಣ್ಣು ನೀರು ಪಾಲಾಗುತ್ತಿದೆ. ಮಣ್ಣು ನೀರಿನಲ್ಲಿ ಭಾಗಶಃ ಕೊಚ್ಚಿಹೋಗಿ ರಸ್ತೆಯ ಬದಿ ಮಣ್ಣಿನ ಸವೆತ ಉಂಟಾಗಿದೆ. ಆದುದರಿಂದ ಇದೇ ರೀತಿ ಪ್ರವಾಹ ಮುಂದುವರೆದರೆ ರಸ್ತೆ ಕೊಚ್ಚಿ ಹೋಗುವ ಅಪಾಯವಿದೆ. ಆದುದರಿಂದ ಮುಂದೆ ಇಲ್ಲಿ ಶಾಶ್ವತ ತಡೆಗೋಡೆ ಕಟ್ಟಿ ಮಣ್ಣು ಸವಕಳಿಯಾಗದಂತೆ ತಡೆಯಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

Must Read